ಮೈಸೂರು : ಮಹಿಳಾ ಸಂಚಾರಿ ಪೊಲೀಸ್ ಅಧಿಕಾರಿಯ ಮಗ ವ್ಹೀಲಿಂಗ್ ಮಾಡುತ್ತಿದ್ದ ಬೈಕ್ ಡಿಕ್ಕಿಯಾಗಿ ದನಗಾಹಿ ವೃದ್ಧ ಸಾವನ್ನಪ್ಪಿ, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಸಂಜೆ ನಡೆದಿದೆ. ಮೃತ ವೃದ್ಧನನ್ನು ಗುರುಸ್ವಾಮಿ (65) ಎಂದು ಗುರುತಿಸಲಾಗಿದೆ. ಗಾಯಾಳು ಗೋವಿಂದ ರಾಜು ಅವರನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಹೀಲಿಂಗ್ ಮಾಡುತ್ತಿದ್ದ ಸೈಯದ್ ಐಮಾನ್ನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ನಡೆದಿದ್ದೇಗೆ?: ಶನಿವಾರ ಸಂಜೆ ಮೃತ ಗುರುಸ್ವಾಮಿ ಮತ್ತು ಗೋವಿಂದರಾಜು ಅವರು ಹಿಮ್ಮಾವು ಕೈಗಾರಿಕಾ ಪ್ರದೇಶದ ಸ್ಥಳದಲ್ಲಿ ಜಾನುವಾರುಗಳನ್ನು ಮೇಯಿಸುತ್ತಾ ರಸ್ತೆ ಬದಿ ಕುಳಿತಿದ್ದರು. ಇಲ್ಲಿ ವ್ಹೀಲಿಂಗ್ ಮಾಡಲು ಸೈಯದ್ ಐಮಾನ್, ಸ್ನೇಹಿತ ಪಂಕಜ್‌ನೊಂದಿಗೆ ಆಗಮಿಸಿದ್ದರು. ರಸ್ತೆಯಲ್ಲಿ ವ್ಹೀಲಿಂಗ್ ಮಾಡುವಾಗ ರಸ್ತೆ ಬದಿ ಕುಳಿತಿದ್ದ ಗುರುಸ್ವಾಮಿ ಹಾಗೂ ಗೋವಿಂದರಾಜ್‌ಗೆ ಬೈಕ್ ಗುದ್ದಿದೆ. ತಕ್ಷಣ ಗ್ರಾಮಸ್ಥರು ಗಾಯಗೊಂಡ ಇಬ್ಬರನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಗುರುಸ್ವಾಮಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸುವಾಗ ಅವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಗಾಯಾಳು ಗೋವಿಂದರಾಜುಗೆ ಚಿಕಿತ್ಸೆ ಮುಂದುವರೆದಿದೆ.
ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು: ವ್ಹೀಲಿಂಗ್ ಮಾಡುವಾಗ ಬಿದ್ದ ಸೈಯದ್ಗೆ ಸಣ್ಣಪುಟ್ಟ ಗಾಯಗಳಾಗಿದೆ. ಈತನನ್ನು ಗ್ರಾಮಸ್ಥರೇ ಸರ್ಕಾರಿ ಆಸ್ಪತ್ರೆಗೆ ಕರೆತಂದು ಯುವಕನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆತನನ್ನು ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ. ಶನಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗುರುಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ನಡೆಯಲಿದೆ. ನಂತರ ಮೃತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
ಜಾಮೀನಿನ ಮೇಲೆ ಹೊರಬಂದು ಮತ್ತದೇ ಚಾಳಿ: ಸೈಯದ್ ಐಮಾನ್ ಕಳೆದ ತಿಂಗಳು ಮೈಸೂರು ನಗರದ ರಿಂಗ್ ರಸ್ತೆಯಲ್ಲಿ ವೀಲಿಂಗ್ ಮಾಡುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ. ಸಿದ್ದಾರ್ಥನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದ ಬಳಿಕ ಮತ್ತೆ ವೀಲಿಂಗ್ ಮಾಡಿ ವ್ಯಕ್ತಿಯೋರ್ವನ ಸಾವಿಗೆ ಕಾರಣನಾಗಿದ್ದಾನೆ.
"ನಂಜನಗೂಡಿನ ಹಿಮ್ಮಾವಿನ ಬಳಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಬೈಕ್ ಸವಾರರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ" ಎಂದು ಹೆಚ್ಚುವರಿ ಎಸ್ಪಿ ನಂದಿನಿ ತಿಳಿಸಿದ್ದಾರೆ.
ಪುತ್ರನ ಬಂಧನ..ಪಿಎಸ್ಐ ಎತ್ತಂಗಡಿ: ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಯ್ಯದ್ ಐಮಾನ್ನನ್ನು ಶನಿವಾರ ತಡರಾತ್ರಿ ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಗುರುಸ್ವಾಮಿ ಪುತ್ರ ಮಹದೇವಸ್ವಾಮಿ ಪ್ರಕರಣ ದಾಖಲಿಸಿ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಪಘಾತದ ಬಳಿಕ ಪರಾರಿಯಾಗಲು ಯತ್ನಿಸಿದ ಸೈಯ್ಯದ್ ಐಮಾನ್ನನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದರು. ಈ ವೇಳೆ ಪಿಎಸ್ಐ ಯಾಸ್ಮಿನ್ ತಾಜ್ ಪುತ್ರ ಎಂದು ಹೇಳಿದ್ದ.
ಈ ಸಂಬಂಧ ನಂಜನಗೂಡು ಸಂಚಾರ ವಿಭಾಗದ ಪಿಎಸ್‌ಐ ಆಗಿದ್ದ ಯಾಸ್ಮಿನ್ ತಾಜ್ಗೆ, ಮಗನ ಪ್ರಕರಣದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ. ಪಿಎಸ್‌ಐ ಯಾಸ್ಮಿನ್ ತಾಜ್ರನ್ನು ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇಂದು ಮಧ್ಯಾಹ್ನ ಡಿಸಿಆರ್‌ಬಿ ಡಿವೈಎಸ್ಪಿ ಬಳಿ ವರದಿ ಮಾಡಿಕೊಳ್ಳುವಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಪಾರ್ಕಿಂಗ್ ಜಾಗದಲ್ಲಿ ಮದ್ಯ ಸೇವನೆ ಬೇಡ ಎಂದಿದ್ದಕ್ಕೆ ಹೋಟೆಲ್ ನೇಮ್ ಪ್ಲೇಟ್ ಧ್ವಂಸ: ಶಿವಮೊಗ್ಗದಲ್ಲಿ ದೂರು ದಾಖಲು