ಮೈಸೂರು : ಕೊರೊನಾ ಸೋಂಕು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನ ಚಿಕಿತ್ಸೆಗೆ ಪರದಾಡುತ್ತಿದ್ದಾರೆ. ಈ ಮಧ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಗೂ ಐಸಿಯು, ಬೆಡ್ ಖಾಲಿ ಇಲ್ಲ ಎಂದು ಬೋರ್ಡ್ ಹಾಕಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು ಜಿಲ್ಲೆಯಲ್ಲಿ ಪ್ರತಿದಿನ 200ಕ್ಕೂ ಹೆಚ್ಚು ಸೋಂಕಿತ ಪ್ರಕರಣ ವರದಿಯಾಗುತ್ತಿವೆ. ಜನರು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಸಾವಿನ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ಈ ಮಧ್ಯೆ ನಗರದ ಕೆ ಆರ್ ಆಸ್ಪತ್ರೆಯ ಆವರಣದಲ್ಲಿರುವ ಕೊರೊನಾ ಸೋಂಕಿತರ ಚಿಕಿತ್ಸಾ ಕೇಂದ್ರದ ಮುಂದೆ ವೆಂಟಿಲೇಟರ್ ಖಾಲಿ ಇಲ್ಲ ಐಸಿಯು, ಬೆಡ್ ಖಾಲಿ ಇಲ್ಲ ಎಂಬ ಬೋರ್ಡ್ ನೇತು ಹಾಕಲಾಗಿದೆ. ಚಿಕಿತ್ಸೆಗೆ ಬಂದ ರೋಗಿಗಳು ಪರದಾಡುತ್ತಿರುವುದು ಕಂಡು ಬಂದಿದೆ.
ಈ ಸಂದರ್ಭದಲ್ಲಿ ತಾಯಿಯನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬಂದ ಪ್ರಕಾಶ್ ಎಂಬ ವ್ಯಕ್ತಿ ಕಳೆದ 2 ಗಂಟೆಯಿಂದ್ಲೂ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ಅಲೆದಾಡಿದರೂ ಬೆಡ್ ಇಲ್ಲ. ವೆಂಟಿಲೇಟರ್ ಇಲ್ಲ, ಐಸಿಯು ಇಲ್ಲ ಎಂದು ಅಲೆದಾಡಿಸುತ್ತಿದ್ದಾರೆ. ಇದರಿಂದ ಬೇಸರಗೊಂಡ ವ್ಯಕ್ತಿ ತಾಯಿ ಸತ್ತರೆ ಮನೆಯಲ್ಲಿ ಸಾಯಲಿ. ಈ ಆಸ್ಪತ್ರೆ ಸಹವಾಸ ಬೇಡ ಎಂದು ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುವೆ ಎಂದು ನೋವಿನಿಂದ ಹೇಳಿದ್ದಾರೆ.