ಮೈಸೂರು: ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ, ಜನತೆ ಆತಂಕ ಪಡುವ ಅಗತ್ಯವಿಲ್ಲ. ಮಳೆಗಾಲದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲಾಗುತ್ತದೆ. ಆ ವೇಳೆ ಯಾವುದೇ ರೀತಿಯ ತೊಂದರೆಯಾಗದಂತೆ, ಹೆಚ್ಚಾಗಿ ಕಲ್ಲಿದ್ದಲನ್ನು ಇಟ್ಟುಕೊಳ್ಳಲಾಗಿದೆ. ಕಲ್ಲಿದ್ದಲಿನ ಬಗ್ಗೆ ದೇಶದ ಜನತೆ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಕಲ್ಲಿದ್ದಲು ಹಾಗೂ ಗಣಿ ಖಾತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ದೇಶದ ಯಾವುದೇ ರಾಜ್ಯಗಳಲ್ಲಿಯೂ ಕಲ್ಲಿದ್ದಲು ಕೊರತೆ ಆಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ದೇಶದ ಪಿಪಿಪಿ ಯೋಜನೆಯಡಿ 21.ಮಿಲಿಯನ್ ಟನ್ ಇಡಲಾಗಿದೆ. 53 ಮಿಲಿಯನ್ ಕೋಲ್ ಇಂಡಿಯಾ ಸಿಂಗ್ರೋಲಿ ಕ್ಯಾಪ್ಟವ್ ಕೂಲ್ ಬ್ಲಾಕ್ ಸೇರಿದಂತೆ ಇತರ ಗೂಡ್ ಶೆಡ್ಗಳಲ್ಲಿ ಸಹ ಕಲ್ಲಿದ್ದಲು ದಾಸ್ತಾನು ಸಂರಕ್ಷಿಸಲಾಗಿದೆ. ಒಟ್ಟು 73 ರಿಂದ 74 ಮಿಲಿಯನ್ ಟನ್ನನ್ನು ಮುನ್ನೆಚ್ಚರಿಕೆಯಾಗಿ ವಿವಿಧ ರಾಜ್ಯಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಇಡಲಾಗಿದೆ ಎಂದರು.
ಅಂಬಾವಿಲಾಸ ಅರಮನೆಯ ಮುಂಭಾಗ ಯೋಗ ದಿನಾಚರಣೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಂಬಾವಿಲಾಸ ಅರಮನೆಯ ಮುಂಭಾಗ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚಾರಣೆಯನ್ನ ಅಂಬಾವಿಲಾಸ ಅರಮನೆ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ.
ಮೋದಿ ಆಗಮನ ಮೈಸೂರಿಗೆ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಸಂತಸ ಹಾಗೂ ಹೆಮ್ಮೆ ತರುತ್ತಿದೆ. ಅದು ಒಂದು ದಿನ ಮಾತ್ರ ಮೋದಿಯವರ ಜೊತೆ ಯೋಗ ಮಾಡುವುದಲ್ಲ, ಅಂದಿನಿಂದ ನಿತ್ಯವೂ ಎಲ್ಲರೂ ಯೋಗ ಮಾಡುವುದಕ್ಕೆ ಪ್ರಾರಂಭಿಸಬೇಕು. ಮೋದಿಯವರ ಆಗಮನ ಎಲ್ಲರಿಗೂ ಯೋಗ ಆರಂಭಿಸಲು ಪ್ರೇರಣೆಯಾಗಲಿ ಎಂದು ಇದೇ ವೇಳೆ ಅವರು ಆಶಿಸಿದರು.
ರೋಹಿತ್ ಚಕ್ರತೀರ್ಥ ವಿಚಾರ ಮುಗಿದ ಅಧ್ಯಾಯ: ರೋಹಿತ್ ಚಕ್ರತೀರ್ಥ ವಿರುದ್ಧ ನಿರ್ಮಲಾನಂದ ಶ್ರೀಗಳ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಾಡಗೀತೆ ವಿವಾದಕ್ಕೆ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ. ಈಗ ರೋಹಿತ್ ಚಕ್ರತೀರ್ಥ ಅವರ ವಿಚಾರ ಮುಗಿದ ಅಧ್ಯಾಯ. ಇನ್ನು ಮುಂದೆ ಮಕ್ಕಳಿಗೆ ನೈಜ ಇತಿಹಾಸವನ್ನ ಹೇಳಲಾಗುತ್ತದೆ. ಆದರೆ ಇದನ್ನ ಕೆಲವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.