ಮೈಸೂರು: ಪೂರ್ವ ಮುಂಗಾರು ಅಂತ್ಯಗೊಂಡು ಮುಂಗಾರು ಆರಂಭವಾಗುತ್ತಿದ್ದರೂ, ವರುಣ ಧರೆಗಿಳಿಯದೇ ಮುನಿಸಿಕೊಂಡಿರುವುದರಿಂದ ಜಮೀನುಗಳಲ್ಲಿ ಬಿತ್ತನೆ ಮಾಡಿ ಮಳೆಗಾಗಿ ರೈತರು ಆಕಾಶವನ್ನು ನೋಡುವಂತಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿದ್ದರಿಂದ ತೋಟಗಾರಿಕೆ ಬೆಳೆ ಬೆಳೆದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಈಗಾಗಲೇ ಭತ್ತ, ರಾಗಿ, ದವಸ ಧಾನ್ಯಗಳನ್ನು ಬೆಳೆದ ಅನ್ನದಾತರು ಮಾರುಕಟ್ಟೆ ಸಿಗದಿದ್ದರೂ ಜೋಪಾನವಾಗಿ ತಾವು ಬೆಳೆದ ಬೆಳೆಗಳನ್ನು ರಕ್ಷಣೆ ಮಾಡಿಕೊಂಡಿದ್ದಾರೆ. ಆದರೆ, ಈಗ ತೋಟಗಾರಿಕೆ ಹಾಗೂ ದವಸ ಧಾನ್ಯಗಳನ್ನು ಬೆಳೆಯುವ ಅನ್ನದಾತರು ಮಳೆಯನ್ನು ಎದುರು ನೋಡುತ್ತಿದ್ದಾರೆ.
ಮೇ ಆರಂಭದಲ್ಲಿ ಮುಂಗಾರು ಚುರುಕುಗೊಳ್ಳಬೇಕಾಗಿತ್ತು. ಆದರೆ, ಇದುವರೆಗೂ ಮುಂಗಾರು ಮಳೆ ಬೀಳುವ ಲಕ್ಷಣಗಳು ಕಂಡುಬರುತ್ತಿಲ್ಲ. ಬೇಸಿಗೆಯಂತೆ ವಾತಾವರಣವಿದೆ. 3.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಅದರಲ್ಲಿ 44,511 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಮಾರಾಟ ಕೇಂದ್ರದಿಂದ 1,610 ಕ್ವಿಂಟಲ್ ಬಿತ್ತನೆ ಬೀಜಗಳು ಮಾರಾಟ ಮಾಡಲಾಗಿದೆ. ಆದರೆ, ಮುಂಗಾರು ಮಳೆ ನಂಬಿಕೊಂಡು ಬಿತ್ತನೆ ಚಟುವಟಿಕೆ ಶುರು ಮಾಡಿದ್ದು, ಈಗ ರೈತರಲ್ಲಿ ಬರದ ಛಾಯೆ ಆವರಿಸಿದೆ.