ಮೈಸೂರು: 20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್‌ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಡಿಂಗ್ ಡಿಂಗ್ ತರಾ ಸೀರಿಯಲ್ ಮಾಡಿದ್ರು ಎಂದು ಹುಣಸೂರು ಶಾಸಕ ಹೆಚ್ ಪಿ ಮಂಜುನಾಥ್ ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಅಬ್ಬರ ಮೀತಿ ಮೀರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದರು. ಆದರೆ, ಯಾರಿಗೆ ಎಷ್ಟು ಹಣ ಹೋಗಿದೆ. ಕೂಲಿ ಕಾರ್ಮಿಕರ ಸ್ಥಿತಿಗತಿ ಏನಾಗಿದೆ? ಇವುಗಳ ಬಗ್ಗೆ ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲವೆಂದು ಕಿಡಿಕಾರಿದರು.
ಕೋವಿಡ್-19 ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜನರನ್ನು ಉಳಿಸುವುದಕ್ಕಿಂತ ಸರ್ಕಾರ ಉಳಿಸಿಕೊಳ್ಳುವ ಚಿಂತೆ ರಾಜ್ಯ ಸರ್ಕಾರದ್ದಾಗಿದೆ ಎಂದು ಹೇಳಿದರು. ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರ ಅವಸರವಾಗಿ ಭೂ ಸುಧಾರಣೆ ಹಾಗೂ ಇತರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತರುತ್ತಿದೆ. ಬಿಜೆಪಿ ಉಳ್ಳವರ ಪರ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.