ಮೈಸೂರು: ಮೂರು ವರ್ಷಗಳ ಹಿಂದೆ ಮಗನ ಮದುವೆಗೆ ಹಣ ಸಂಪಾದನೆ ಮಾಡಬೇಕೆಂದು ಮನೆ ಬಿಟ್ಟು ಬಂದ ವ್ಯಕ್ತಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಸಂಕಷ್ಟದಲ್ಲಿದ್ದ ಈ ವ್ಯಕ್ತಿಗೆ ನಗರದ ಎನ್ಜಿಒವೊಂದು ಸ್ಪಂದಿಸಿದೆ.
ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳ ಸಹಾಯ ಪಡೆದು ಎನ್ಜಿಓ ಅಧಿಕಾರಿಗಳು ವ್ಯಕ್ತಿಯ ಕುಟುಂಬವನ್ನು ಹುಡುಕಿ, ತವರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಉತ್ತರ ಪ್ರದೇಶದ ಸಹರಾನ್ಪುರ್ ಜಿಲ್ಲೆಯ ರಾಜುಪುರ್ ಗ್ರಾಮ ಕರಮ್ ಸಿಂಗ್ ಎಂಬಾತ ಕಳೆದ 3 ವರ್ಷಗಳ ಹಿಂದೆ ತಮ್ಮ ಕಿರಿಯ ಮಗನ ಮದುವೆಗೆ ಹಣ ಸಂಪಾದನೆ ಮಾಡಲೆಂದು ಹೊರಟಿದ್ದರು. ಆದರೆ ರೈಲಿನಲ್ಲಿ ಸಂಚರಿಸುತ್ತಿದ್ದ ಇವರು ದಾರಿ ತಪ್ಪಿ ಮೈಸೂರಿಗೆ ಬಂದಿದ್ದರು. ಭಾಷೆ ಸಮಸ್ಯೆಯಿಂದ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು.
ಲಾಕ್ಡೌನ್ ಸಮಯದಲ್ಲಿ ರಸ್ತೆ ಪಕ್ಕ ವಾಸವಾಗಿದ್ದ ವೃದ್ಧನನ್ನು ಕಂಡ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು, ಖಾಸಗಿ ಎಸ್ಜಿಓಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ನಡೆಸಿ ಕರಮ್ ಸಿಂಗ್ ಅವರನ್ನು ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು.
ಈ ವೇಳೆ ಕರಮ್ ಸಿಂಗ್ ಹಿಂದಿ ಚಿತ್ರ ಗೀತೆಗಳನ್ನು ಹಾಡುತ್ತಿರುವುದನ್ನು ಆಲಿಸಿದ ಸಂಘಟಕರು, ಆತನನ್ನು ವಿಚಾರಿಸಿದಾಗ ಉತ್ತರ ಪ್ರದೇಶದ ಸಹರಾನ್ಪುರ್ ಜಿಲ್ಲೆಯ ರಾಜುಪುರ್ ಗ್ರಾಮದವರು ಎಂಬ ವಿಚಾರ ತಿಳಿದು ಅವರ ಕುಟುಂಬದ ಕುರಿತು ಮಾಹಿತಿ ಕಲೆ ಹಾಕಿದರು.
ನೆರವಿಗೆ ಬಂದ ಪೊಲೀಸರು:
ಬಳಿಕ ನಗರದ ದೇವರಾಜ್ ಅರಸು ಪೊಲೀಸರ ಸಹಕಾರದಿಂದ ಉತ್ತರ ಪ್ರದೇಶದ ರಾಜುಪುರ್ ಪೊಲೀಸ್ ಠಾಣೆಗೆ ಈತನ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಈ ಮನವಿಗೆ ಸ್ಪಂದಿಸಿದ ಅಲ್ಲಿನ ಪೊಲೀಸರು, ಕರಮ್ಸಿಂಗ್ ಅವರ ಗ್ರಾಮಕ್ಕೆ ಹೋಗಿ ಈತನ ಕುಟುಂಬದವರ ಕುರಿತಾದ ಮಾಹಿತಿ ಕಲೆ ಹಾಕಿ ಮಕ್ಕಳನ್ನು ಪತ್ತೆ ಹಚ್ಚಿದರು. ನಂತರ ಅವರ ಮಗನ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿಸಿದಾಗ ಕರಮ್ ಸಿಂಗ್ರನ್ನು ಅವರು ಮಗನ ಗುರುತು ಹಿಡಿದರು.
ಕಳೆದ ಮೂರು ವರ್ಷಗಳಿಂದ ಮೈಸೂರಲ್ಲಿದ್ದ ಕರಮ್ ಸಿಂಗ್ ತಮ್ಮ ಕುಟುಂಬದವರ ನೆನೆಪಾಗಿದ್ದು, ತಂದೆಯನ್ನು ಕಂಡು ಮಕ್ಕಳು ಸಂತಸಗೊಂಡರು. ಇನ್ನು ಕರಮ್ ಸಿಂಗ್ ಜೂನ್. 01 ರಂದು ರೈಲಿನ ಮೂಲಕ ತವರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಎನ್ಜಿಒ ಮುಖ್ಯಸ್ಥ ಎಂ.ಪಿ. ವರ್ಷ ಈಟಿವಿ ಭಾರತ್ಗೆ ತಿಳಿಸಿದರು.