ಮೈಸೂರು : ಕಳೆದ ಎರಡು ದಿನಗಳ ಹಿಂದೆ ನವ ವಿವಾಹಿತ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಗಂಡ ಹಾಗೂ ಅವರ ಕುಟುಂಬದವರ ಮೇಲೆ ದೂರು ದಾಖಲಾಗಿದೆ. ಈ ಸಂಬಂಧ ಇಬ್ಬರನ್ನೂ ಬಂಧಿಸಿದ್ದು, ಐದು ಜನ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಶನಿವಾರ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ವಾಸವಿದ್ದ ಶ್ಯಾನುಬೋಗನಹಳ್ಳಿಯ ಮಹಿಳಾ ಲೆಕ್ಕಾಧಿಕಾರಿ ಕೃಷ್ಣ ಬಾಯಿ ತುಕಾರಾಂ ಪಡ್ಕೆ (25) ಎಂಬುವರು ತಮ್ಮ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದರು. ಇವರು ಕಳೆದ ತಿಂಗಳು ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವಲಯದಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸುಭಾಷ್ ಬೋಸ್ಲೆ ಎಂಬುವರನ್ನು 40 ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಕಳೆದ ಶನಿವಾರ ಕೆಲಸಕ್ಕೆ ಹಾಜರಾಗಿದ್ದರು.
ಆದರೆ ಕಳೆದ ಶನಿವಾರ ಗ್ರಾಮ ಲೆಕ್ಕಾಧಿಕಾರಿ ತಮ್ಮ ಬಿಳಿಕೆರೆ ನಿವಾಸದಲ್ಲಿ, ಫೋನ್ನಲ್ಲಿ ಯಾರದೋ ಜೊತೆ ಮಾತನಾಡುತ್ತ, ರೂಮಿಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಂಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಸಾವಿಗೆ ಮೃತರ ಗಂಡನ ಮನೆಯವರು ಕಾರಣ ಎಂದು ಕೃಷ್ಣ ಬಾಯಿ ಅವರ ಪೋಷಕರ ಆರೋಪವಾಗಿದೆ.
ಗಂಡ ಸೇರಿ ಏಳು ಜನರ ವಿರುದ್ಧ ದೂರು ದಾಖಲು : ಹೆಂಡತಿ ನೇಣಿಗೆ ಶರಣಾದ ವಿಷಯ ತಿಳಿದರೂ ಸಹ ಮೃತದೇಹ ನೋಡಲು ಬಾರದ ಗಂಡ ಸುಭಾಷ್ ಬೋಸ್ಲೆ ನಡವಳಿಕೆಯಿಂದ ಅನುಮಾನಗೊಂಡ ಮೃತ ಕೃಷ್ಣ ಬಾಯಿ ಪಡ್ಕೆ ಅವರ ತಂದೆ ತುಕಾರಾಂ ಅವರು, ಅಳಿಯ ಮತ್ತು ಆತನ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ. ಹೀಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಲೆಕ್ಕಾಧಿಕಾರಿ ಸಾವಿಗೆ ಆಕೆಯ ಗಂಡ ಸುಭಾಷ್ ಬೋಸ್ಲೆ ಸೇರಿ ಅವರ ಕುಟುಂಬದ ಏಳು ಜನ ವರದಕ್ಷಿಣೆ ಕಿರುಕುಳ ನೀಡಿ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನನ್ವಯ ಮೃತ ಕೃಷ್ಣ ಬಾಯಿ ಪಡ್ಕೆ ಮಾವ ಬಾಳಪ್ಪ ಅಣ್ಣಪ್ಪ ಮತ್ತು ಭಾವ ಅಮರನಾಥ್ ಪಾಟೀಲ್ ಎಂಬುವರನ್ನು ಬಿಳಿಕೆರೆ ಪೊಲೀಸರು ಬಂಧಿಸಿದ್ದು. ಗಂಡ ಸೇರಿದಂತೆ ಐದು ಜನ ನಾಪತ್ತೆಯಾಗಿದ್ದಾರೆ. ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ವಿವರ : ಮೃತ ಕೃಷ್ಣ ಬಾಯಿ ತುಕಾರಾಂ ಪಡ್ಕೆ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಎಸ್ಗಳ್ಳಿ ಗ್ರಾಮದವರಾಗಿದ್ದು, ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಶ್ಯಾನುಭೋಗನಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಕೃಷ್ಣ ಬಾಯಿ ತುಕಾರಾಂ ಪಡ್ಕೆ ಮತ್ತು ಅವರ ತಾಯಿ ಮನೆಯಲ್ಲೇ ಇದ್ದರು. ಅಂದು ಬೆಳಗ್ಗೆಯಿಂದಲೇ ಯಾರೊಂದಿಗೋ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದರು. ನಂತರ ಕೊಠಡಿ ಚಿಲಕ ಹಾಕಿಕೊಂಡಿದ್ದು, ಅನೇಕ ಬಾರಿ ಕೂಗಿದರೂ ಬಾಗಿಲು ತೆಗೆಯಲಿಲ್ಲ. ಏನೋ ಅನಾಹುತ ಆಗಿರಬೇಕೆಂದು ಅಕ್ಕಪಕ್ಕದವರ ನೆರವಿನಿಂದ ಬಾಗಿಲು ಒಡೆದು ನೋಡಲಾಗಿದೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ತಕ್ಷಣವೇ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ತಹಶೀಲ್ದಾರ್ ಡಾ. ಅಶೋಕ್ ಅವರ ಸಮ್ಮುಖದಲ್ಲಿ ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು.
ಇದನ್ನೂ ಓದಿ :ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ