ಮೈಸೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಭಾರತದ ಅಸ್ಮಿತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಸೂರಿನ ಲಲಿತ ಮಹಲ್ ಹೊಟೇಲ್ದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರೀಯ ಪರಿಶಿಷ್ಟ ಜಾತಿ ಕಾರ್ಯಕಾರಣಿ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಎಸ್ಸಿ, ಎಸ್ಟಿ ಸಮುದಾಯ ಒಟ್ಟಿಗೆ ಇದ್ದರೆ ಬಲ ಜಾಸ್ತಿಯಾಗಲಿದೆ. ಎಸ್ಸಿ ಎಸ್ಟಿ ಸಮುದಾಯಗಳು ಭಾರತೀಯ ಸಮಾಜದ ಪ್ರಮುಖ ಅಂಗಗಳಾಗಿವೆ. ಎರಡು ಸಮುದಾಯಗಳು ಭಾರತದ ಅಸ್ಮಿತೆಯಾಗಿವೆ. ಹಾಗಾಗಿ ಎರಡೂ ಸಮುದಾಯಗಳಿಗೂ ಶಕ್ತಿ ತುಂಬುವ ಅಗತ್ಯವಿದೆ ಎಂದು ತಿಳಿಸಿದರು.
ದೇಶದ ಆರ್ಥಿಕ ವ್ಯವಸ್ಥೆ ದುಡಿಯುವ ಕೆಳವರ್ಗದ ಕೈಯಲ್ಲಿದೆ. ದುಡಿಯುವ ವರ್ಗ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ತಳ ಸಮುದಾಯಗಳು ಸ್ವಾಭಿಮಾನಿ, ಸ್ವಾವಲಂಬಿಯಾಗುವ ಅಗತ್ಯವಿದೆ. ನಾವು ಯಾರಿಗೂ ಕಡಿಮೆಯಿಲ್ಲ, ನಮಗೆ ಯಾರದೇ ಅನುಕಂಪದ ಅಗತ್ಯ ಇಲ್ಲ ಎಂಬ ಮನೋಭಾವನೆಯಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಶೋಷಿತರ ಧ್ವನಿ ಅಂಬೇಡ್ಕರ್: ಅಂಬೇಡ್ಕರ್ ಪರಮ ಶ್ರೇಷ್ಠ ವ್ಯಕ್ತಿ. ಶೋಷಿತರ ಧ್ವನಿಯಾಗಿ ಕೆಲಸ ಮಾಡಿದ್ದರು. ನಾನೂ ಸಹ ಅಂಬೇಡ್ಕರ್ ವಾದಿ ಎಂದು ಗರ್ವದಿಂದ ಹೇಳುತ್ತೇನೆ. ಅಂಬೇಡ್ಕರ್ ನಂಬರ್ ಒನ್ ದೇಶ ಭಕ್ತರಾಗಿದ್ದರು. ಅಂಬೇಡ್ಕರ್ ಸಂಸತ್ಗೆ ಬರಲು ಅವಕಾಶ ನೀಡದ ಕಾಂಗ್ರೆಸ್ ಪಕ್ಷ ಇದೀಗ ಅಂಬೇಡ್ಕರ್ ಮುಂದಿಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಯತ್ನಿಸುತ್ತಿದೆ. ಅಂಬೇಡ್ಕರ್ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಜಾಗ ಕೊಡಲಿಲ್ಲ. ಆದರೆ, ದಲಿತರ ಮತ ಪಡೆಯಲು ಕಾಂಗ್ರೆಸ್ ಅಂಬೇಡ್ಕರ್ ಹೆಸರು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ: ತುಳಿತಕ್ಕೊಳಗಾದರಿಗೆ, ಅವಕಾಶ ವಂಚಿತರಿಗೆ ನ್ಯಾಯ ಕೊಡಬೇಕು ಎನ್ನುವ ಕಾರಣಕ್ಕೆ ಕಳಕಳಿಯಿಂದ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು, ಹತ್ತು ಹಲವು ಸಮುದಾಯದಲ್ಲಿ ಅವಕಾಶ ವಂಚಿತರಿದ್ದಾರೆ. ಅವರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಮತ್ತಷ್ಟು ಸಮಯದಾಯದ ಮೀಸಲಾತಿ ಹೆಚ್ಚಳದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿಎಂ, ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದೇವೆ. ಇದು ಐತಿಹಾಸಿಕ ನಿರ್ಣಯವಾಗಿದೆ, ಕಳೆದ 50 ವರ್ಷಗಳಿಂದ ಮೀಸಲಾತಿ ಹೆಚ್ಚಿಸಬೇಕು ಎನ್ನುವ ಬೇಡಿಕೆ ಇತ್ತು. ಹತ್ತು ಹಲವಾರು ಸರ್ಕಾರಗಳು ಬಂದು ಹೋದರೂ ಇದಕ್ಕೆ ನಿರ್ಣಯ ಕೈಗೊಳ್ಳಲು ಆಗಿರಲಿಲ್ಲ.
ಇದಕ್ಕೆ ಹಲವಾರು ಕಾರಣಗಳೂ ಇವೆ. ಕಾನೂನಾತ್ಮಕ ಕಾರಣ ಇದೆ. ಹಾಗಾಗಿ ಯಾರನ್ನೂ ದೂಷಿಸಲ್ಲ, ಆದರೆ, ಇದಕ್ಕೆ ರಾಜಕೀಯ ಇಚ್ಛಾ ಶಕ್ತಿಯ ಅವಶ್ಯಕತೆಯೂ ಇತ್ತು. ಅದನ್ನು ನಾವು ಮಾಡಿದ್ದೇವೆ. ಇದಕ್ಕೆ ಸಂಪುಟ ಸಹೋದ್ಯೋಗಿಗಳು, ಪಕ್ಷದ ಕೋರ್ ಕಮಿಟಿ, ಕಾರ್ಯಕಾರಿ ಸಮಿತಿ, ಹಿರಿಯ ನಾಯಕರ ಆಶೀರ್ವಾದ ಇತ್ತು. ಇದು ಬಿಜೆಪಿಯ ಧ್ಯೇಯ ಮತ್ತು ಬಿಜೆಪಿಯ ಬದ್ಧತೆ ಪಾಲಿಸಿದೆ ಎಂದು ಹೇಳಿದರು.
ಹತ್ತು ಹಲವಾರು ಪಕ್ಷಗಳನ್ನು ಮೀಸಲಾತಿ ಹೆಚ್ಚಳ ವಿಷಯವನ್ನೇ ದಾಳವಾಗಿ ಮಾಡಿಕೊಂಡು ಹಲವು ಚುನಾವಣೆ ಗೆದ್ದಿರುವುದನ್ನು ನೋಡಿದ್ದೇವೆ. ಆದರೆ, ನಮ್ಮ ಬಿಜೆಪಿ ಪಕ್ಷದ ಉದ್ದೇಶ ಅದಲ್ಲ, ತುಳಿತಕ್ಕೊಳಗಾದರಿಗೆ, ಅವಕಾಶ ವಂಚಿತರಿಗೆ ನ್ಯಾಯ ಕೊಡಬೇಕು ಎನ್ನುವ ಕಾರಣಕ್ಕೆ ಕಳಕಳಿಯಿಂದ ನಾನು ಈ ಕೆಲಸ ಮಾಡಿದ್ದೇನೆ. ಕೆಲವರು ಅಧಿಕಾರದಲ್ಲಿದ್ದಾಗ ಏನೂ ಮಾಡಿರಲಿಲ್ಲ, ಆದರೆ ನಾವು ಮಾಡಿದ್ದೇವೆ. ಈಗ ಅದನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡುವ ದೊಡ್ಡ ಜವಾಬ್ದಾರಿ ಮಾಡಿ ಮುಗಿಸಿದ್ದೇವೆ ಎಂದು ವಿಶ್ವಾಸ ಮೂಡಿಸಿದರು.
ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಲವು ಮಂದಿ ಕೇಂದ್ರ ಸಚಿವರು, ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂಓದಿ:ಯಡಿಯೂರಪ್ಪಗೆ ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಇದೆ: ಬಿವೈ ವಿಜಯೇಂದ್ರ ಸ್ಪಷ್ಟನೆ