ಮೈಸೂರು: ರಾಜ್ಯದ ಜಿಲ್ಲಾ ಪಂಚಾಯಿತಿಗಳಿಗೆ ಸರ್ಕಾರ ನೀಡಿದ್ದ ಗುರಿ ಅನ್ವಯ ಮೈಸೂರು ಜಿಲ್ಲಾ ಪಂಚಾಯಿತಿಯಿಂದ ವಿಶೇಷವಾಗಿ 19 ಕೆರೆಗಳ ಸ್ಥಳದಲ್ಲಿಯೂ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರ ಧ್ವಜ ಹಾರಿಸುವ ಕಾರ್ಯಕ್ರಮ ಆಯೋಜಿಸಿದೆ.
ಸ್ವಾತಂತ್ರ್ಯೂತ್ಸವದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಕೇಂದ್ರ ಸರ್ಕಾರ 'ಅಮೃತ ಸರೋವರ' ಕಾರ್ಯಕ್ರಮದಡಿ ಸಾಂಪ್ರದಾಯಿಕ ಜಲಮೂಲಗಳನ್ನು ಪುನಶ್ಚೇತನಗೊಳಿಸಲು ಎಲ್ಲಾ ಜಿಲ್ಲಾ ಪಂಚಾಯಿತಿಗಳಿಗೆ ವಾರ್ಷಿಕ 75 ಕೆರೆಗಳ ಸಂರಕ್ಷಣೆಗೆ ಗುರಿ ನೀಡಿತ್ತು. ಸ್ವಾತಂತ್ರ್ಯ ದಿನಾಚರಣೆಗೆ 15 ಕೆರೆಗಳ ಪುನರುಜ್ಜೀವನಗೊಳಿಸಲೇಬೇಕೆಂಬ ನಿರ್ದೇಶನ ನೀಡಿತ್ತು. ಜಿಲ್ಲಾ ಪಂಚಾಯತ್ 19 ಕೆರೆಗಳ ಕಾಮಗಾರಿ ಪೂರ್ಣಗೊಳಿಸಿದ್ದು, ಅಷ್ಟೂ ಕೆರೆಗಳ ಬಳಿ ಆ.15ರಂದು ರಾಷ್ಟ್ರ ಧ್ವಜ ಹಾರಿಸಲಿದೆ.
ಕೆರೆಗಳ ಏರಿ ಬಲವರ್ಧನೆ, ಹೂಳೆತ್ತಿ ನೀರಿನ ಶೇಖರಣಾ ಸಾಮರ್ಥ್ಯ ವೃದ್ಧಿಸುವುದು, ಪೂರಕ ನಾಲೆಗಳ ಅಭಿವೃದ್ಧಿ, ಕೆರೆ ಸುತ್ತಲೂ ನೆಡುತೋಪುಗಳ ನಿರ್ಮಾಣ ಹಾಗೂ ಪರಿಸರ ಸಂರಕ್ಷಣೆ ಇತ್ಯಾದಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.
ಅಶೋಕ, ಅರಳಿ ಸೇರಿ ಮೂರು ಬಗೆಯ ಸಸಿಗಳನ್ನು ನೆಟ್ಟು ಕೆರೆ ಸುತ್ತ ಅರಣೀಕರಣ ಮಾಡಿ ಪರಿಸರ ಸಮತೋಲನ ಕಾಪಾಡುವುದು, ಒತ್ತುವರಿ ತಡೆಯುವುದು ಹಾಗೂ ಬರುವ ದಿನಗಳಲ್ಲಿ ಕೆರೆಗಳ ಸ್ವಚ್ಛತಾ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ: 75 ಮೀಟರ್ ಉದ್ದದ ಬೃಹತ್ ತಿರಂಗಾ ಯಾತ್ರೆ
ಈ ಕುರಿತು ವಿವರಣೆ ನೀಡಿರುವ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಕೃಷ್ಣರಾಜು, ಸರ್ಕಾರದ ಸೂಚನೆ ಮೇರೆಗೆ ಅಮೃತ ಸರೋವರ ಯೋಜನೆಯಡಿ 79 ಕೆರೆಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ತಯಾರಿ ನಡೆದಿದೆ. ಆ.15ಕ್ಕೆ 19 ಕೆರೆಗಳ ಬಳಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.