ಮೈಸೂರು: ಒಂದು ವರ್ಷದ ಹಿಂದೆ ನಂಜನಗೂಡಿನಲ್ಲಿ ಪ್ರವಾಹ ಬಂದು ಮನೆ- ಮಠ ಕಳೆದುಕೊಂಡ ಸಂತ್ರಸ್ತರು ಯಾವುದೇ ಪರಿಹಾರ ಸಿಕ್ಕಿಲ್ಲವೆಂದು ಆರೋಪಿಸಿ ಕಣ್ಣೀರು ಹಾಕುತ್ತಿದ್ದಾರೆ. ಒಂದು ವರ್ಷದಿಂದ ಒಂದು ರೂಪಾಯಿ ಪರಿಹಾರ ಸಹ ಸಿಗದೆ ಕಂಗಾಲಾಗಿದ್ದಾರೆ. ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ವೇಳೆ ಕಪಿಲ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ನಂಜನಗೂಡಿನ ದೇವಾಲಯದ ಬಳಿ ಇರುವ ಒಕ್ಕಲಗೇರಿ, ಕುರುಬಗೇರಿ ಗ್ರಾಮ, ತೋಪಿನ ಬೀದಿ, ಮೇದರಗೇರಿ ಸೇರಿದಂತೆ ನದಿ ದಡದ ಸರಗೂರಿನ ಕೆಲವು ಗ್ರಾಮಗಳು ಮುಳುಗಿದವು. ಜನರು ತಮ್ಮ ಮನೆ-ಮಠ ಕಳೆದುಕೊಂಡು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದರು. ಆ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ., ಮನೆ ಬಾಡಿಗೆಗೆ ಪ್ರತಿ ತಿಂಗಳು 5,000 ರೂ. ನೀಡುವ ಭರವಸೆ ನೀಡಿತ್ತು.
ಒಂದು ವರ್ಷ ಕಳೆದರೂ ಯಾವುದೇ ಹಣ ನೀಡಿಲ್ಲ. ಮನೆ ನಿರ್ಮಾಣಕ್ಕೆ ಕೊಡುತ್ತೇವೆ ಎಂದಿದ್ದ ಲಕ್ಷ ರೂ. ಸಹ ಕೊಟ್ಟಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ ಸಂತ್ರಸ್ತೆ ಸುಬ್ಬಮ್ಮ.
ಹೋದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರವಾಹ ಬಂದು ಮನೆಗಳು ಮುಳುಗಡೆಯಾದವು. ಗೋಡೆಗಳು ಕುಸಿದು ನೆಲಸಮವಾದವು. ನಮ್ಮ 3 ಮನೆಗಳು ಧರೆಗುರುಳಿದವು. ಆದರೂ ನಮ್ಮನ್ನು ಮನೆ ಕಳೆದುಕೊಂಡವರ ಪಟ್ಟಿಗೆ ಸೇರಿಸಲಿಲ್ಲ. ನಮಗೆ ಅನ್ಯಾಯ ಆಗಿದೆ. ಸರ್ಕಾರ ನಮಗೆ ನೆರವಾಗಿಲ್ಲ. ಈಗ ವಾಸ ಮಾಡಲೂ ನಮಗೆ ಮನೆಯಿಲ್ಲ ಎಂದು ಸಂತ್ರಸ್ತೆ ಅಳಲು ತೋಡಿಕೊಂಡರು.
ನಮಗೆ ಸರ್ಕಾರದಿಂದ ಯಾವ ದುಡ್ಡು ಬಂದಿಲ್ಲ. ನಾವು ತಾಲೂಕು ಕಚೇರಿಗೆ ಹೋಗಿ ವಿಚಾರಿಸಿದರೆ, 'ಬರುತ್ತೆ ಹೋಗಿ' ಎಂದು ಹೇಳಿ ಕಳುಹಿಸುತ್ತಾರೆ. ನಮ್ಮ ಹತ್ತಿರ ದಾಖಲಾತಿ ಇದೆ. ಹೋದ ವರ್ಷ ವರಮಹಾಲಕ್ಷ್ಮಿ ಹಬ್ಬದಂದೇ ಪ್ರವಾಹ ಬಂದಿತ್ತು. ಈವರೆಗೂ ಒಂದು ರೂಪಾಯಿ ಬಂದಿಲ್ಲ ಎನ್ನುತ್ತಾರೆ ಸಂತ್ರಸ್ತ ಗಣೇಶ್.
4 ತಿಂಗಳಿನಿಂದ ಫೈಲನ್ನು ತಾಲೂಕು ಆಫೀಸ್ನಲ್ಲಿ ಇಟ್ಟುಕೊಂಡು ಭರವಸೆ ಕೊಟ್ಟಿದ್ದರು. ಆ ನಂಬಿಕೆಯಿಂದ ನಾವು ಸುಮ್ಮನೆ ಇದ್ದೇವು. ನಂತರ 4 ತಿಂಗಳು ಆದ ಮೇಲೆ ಹೋಗಿ ಕೇಳಿದ್ದಕ್ಕೆ ಮೈಸೂರು ಡಿಸಿ ಆಫೀಸ್ಗೆ ಹೋಗಿದೆ. ನಂತರ ಅದು ಬೆಂಗಳೂರಿಗೆ ಹೋಗಬೇಕು. ಅಲ್ಲಿಂದ ಹಣ ಬರಬೇಕು ಎಂದು ಹೇಳುತ್ತಾರೆ. ಅಧಿಕಾರಿಗಳು ಬಂದು ನೀವು ಮನೆ ಮಾಡಿಕೊಳ್ಳಿ 10 ತಿಂಗಳ ಬಾಡಿಗೆ ಹಾಗೂ 5,000 ರೂ. ನೀಡುತ್ತೇವೆ ಎಂದಿದ್ದರು. ಮನೆ ಮಾಡಿಕೊಂಡ ಮೇಲೆ ಬಾಡಿಗೆಯ ದುಡ್ಡು ಸಹ ಬಂದಿಲ್ಲ. ಯಡಿಯೂರಪ್ಪನವರು ಪ್ರವಾಹ ವೇಳೆ ಭೇಟಿ ಕೊಟ್ಟಿದ್ದಾಗ, 'ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡುತ್ತೇವೆ' ಎಂದಿದ್ದರು. ಇದುವರೆಗೂ ಯಾವ ಹಣವೂ ಬಂದಿಲ್ಲ ಎಂದು ದೂರಿದರು.
ವರ್ಷ ಕಳೆದರೂ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ. ಸಂತ್ರಸ್ತರು ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಗಳು ಇದರ ಕಡೆ ಗಮನ ಹರಿಸಬೇಕಾಗಿದೆ.