ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತಾದ ಅಂಬಾವಿಲಾಸ ಅರಮನೆಗೆ ವಿಶ್ವ ಮನ್ನಣೆ ದೊರೆತಿದೆ. ಪ್ರತಿಷ್ಠಿತ ವಿಶ್ವದ ಟಾಪ್ 20 ಗೂಗಲ್ ರಿವ್ಯೂವ್ ಪಟ್ಟಿಯಲ್ಲಿ ಮೈಸೂರು ಅರಮನೆಗೂ ಸ್ಥಾನ ಲಭಿಸಿದೆ.
ಮೈಸೂರು ಜಿಲ್ಲೆ ಪ್ರವಾಸೋದ್ಯಮದ ತಾಣವಾಗಿದ್ದು, ದಿನನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ವಿಶ್ವವಿಖ್ಯಾತ ಮೈಸೂರು ದಸರಾವು ಪ್ರವಾಸಿಗರ ಕೇಂದ್ರ ಬಿಂದುವಾಗಿದ್ದು, ಅಂಬಾವಿಲಾಸ ಅರಮನೆಯನ್ನು ನೋಡಲು ದೇಶ-ವಿದೇಶಗಳಿಂದ ಪ್ರತಿ ವರ್ಷ6 ದಶಲಕ್ಷ ಪ್ರವಾಸಿಗರು ಬರುತ್ತಾರೆ.
ಮೈಸೂರು ದಸರಾ, ಜಂಬೂ ಸವಾರಿ ಹಾಗೂ ಅಂಬಾವಿಲಾಸ ಅರಮನೆಯ ಕುರಿತು ಕೋಟ್ಯಂತರ ಮಂದಿ ಗೂಗಲ್ನಲ್ಲಿ ಸರ್ಚ್ ಮಾಡುತ್ತಾರೆ. ಸಾವಿರಾರು ಮಂದಿ ಅರಮನೆಯ ಬಗ್ಗೆ ತಿಳಿದುಕೊಳ್ಳಲು ಗೂಗಲ್ಗೆ ಹೋಗುತ್ತಾರೆ. ಇದೀಗ ಗೂಗಲ್ ಪ್ರಕಟಿಸಿರುವ ವಿಶ್ವದ ಟಾಪ್ 20 ರಿವ್ಯೂವ್ ತಾಣಗಳಲ್ಲಿ ಮೈಸೂರಿನ ಅಂಬಾ ವಿಲಾಸ ಅರಮನೆಗೆ 15ನೇ ಸ್ಥಾನ ಲಭಿಸಿದೆ. ಗೂಗಲ್ ಮ್ಯಾಪ್ಗೆ ಭೇಟಿ ನೀಡಿದ ವೇಳೆ ನೀಡುವ ರಿವ್ಯೂವ್ (ಪ್ರತಿಕ್ರಿಯೆ) ಆಧಾರದ ಮೇಲೆ ಈ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮೈಸೂರು ಅರಮನೆಗೆ ಒಟ್ಟು 193,177 ರಿವ್ಯೂವ್ ಬಂದಿದ್ದು, ವಿಶ್ವದ ಪ್ರಮುಖ ತಾಣಗಳ ಪಟ್ಟಿಯಲ್ಲಿ 15 ನೇ ಸ್ಥಾನ ಗಳಿಸಿದೆ.
ತಾಜ್ ಮಹಲ್‌ಗಿಂತ ಹೆಚ್ಚು ರಿವ್ಯೂವ್: ಗೂಗಲ್ ಪ್ರಕಟಿಸಿರುವ ಟಾಪ್ 20 ಪಟ್ಟಿಯಲ್ಲಿ ಅಂಬಾವಿಲಾಸ ಅರಮನೆಗೆ ಆಗ್ರಾದ ತಾಜ್ ಮಹಲ್‌ಗಿಂತ ಹೆಚ್ಚಿನ ರಿವ್ಯೂವ್ ಬಂದಿದೆ. ತಾಜ್ ಮಹಲ್ಗೆ ಒಟ್ಟು 187,345 ರಿವ್ಯೂವ್ ಬಂದಿದ್ದು, ಪಟ್ಟಿಯಲ್ಲಿ 17 ನೇ ಸ್ಥಾನದಲ್ಲಿ ಇದೆ. ದೇಶದಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣಗಳಲ್ಲಿ ತಾಜ್ ಮಹಲ್ ಹಾಗೂ ಅಂಬಾವಿಲಾಸ ಅರಮನೆ ಟಾಪ್ ಸ್ಥಾನದಲ್ಲಿ ಇರುವುದು ಹೆಮ್ಮೆಯ ವಿಷಯ.
ಸೋಷಿಯಲ್ ಮೀಡಿಯಾದಲ್ಲಿ ಸಂತಸ: ವಿಶ್ವದ ಟಾಪ್ 20 ರಿವ್ಯೂವ್ ತಾಣಗಳಲ್ಲಿ ಮೈಸೂರಿನ ಅರಮನೆಗೆ 15 ನೇ ಸ್ಥಾನ ದೊರಕಿರುವುದಕ್ಕೆ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.