ಮೈಸೂರು: ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ಅಪಘಾತಗಳು ಜರುಗುವುದರಿಂದ ಸಾರ್ವಜನಿಕ ಸ್ಥಳಗಳು ಹಾಗೂ ನಗರದ ಹೊರವಲಯದ ರಸ್ತೆಗಳಲ್ಲಿ ದನ ಮತ್ತು ಹಂದಿಗಳನ್ನು ಬಿಡಬಾರದು. ಹಾಗೊಂದು ವೇಳೆ ಬಿಟ್ಟರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾಲೀಕರಿಗೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ನಗರದಲ್ಲಿ ಇತ್ತೀಚೆಗೆ ಬಿಡಾಡಿ ದನಗಳು, ಹಂದಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಮೈಸೂರು ನಗರ ನಿವಾಸಿಗಳು ಹೈರಾಣಾಗಿದ್ದಾರೆ. ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ಎಚ್ಚೆತ್ತ ಮೈಸೂರು ಮಹಾನಗರ ಪಾಲಿಕೆ ಬಿಡಾಡಿ ದನಗಳು ಮತ್ತು ಹಂದಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದೆ.
ಕಟ್ಟುನಿಟ್ಟಿನ ಕ್ರಮ- ಪಾಲಿಕೆ ಆಯುಕ್ತರ ಸೂಚನೆ: ನಗರದಲ್ಲಿ ಬಿಡಾಡಿ ದನ, ಹಂದಿಗಳು ಕಸದ ತೊಟ್ಟಿಗಳಲ್ಲಿ ಇರುವ ಆಹಾರ ಸೇವಿಸುವುದಕ್ಕಾಗಿ ಕಸವನ್ನೆಲ್ಲ ಚೆಲ್ಲಾಡುವುದರಿಂದ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿವೆ. ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ನಗರದ ನೈರ್ಮಲ್ಯವೂ ಹಾಳಾಗುತ್ತಿದೆ. ಇದರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದು, ಬಿಡಾಡಿ ಹಸು ಮತ್ತು ಹಂದಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದು. ಅವುಗಳ ನಿಯಂತ್ರಣ ಅತ್ಯವಶ್ಯಕ ಎಂದು ಪಾಲಿಕೆ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಬಿಡಾಡಿ ಹಸುಗಳು ಮತ್ತು ಹಂದಿಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ, ಸ್ಥಳಗಳಲ್ಲಿ, ರಸ್ತೆಗಳಲ್ಲಿ ಬಿಡುವ ಮಾಲೀಕರ ವಿರುದ್ಧ ಪಾಲಿಕೆ ಕಡೆಯದಾಗಿ ಎಚ್ಚರಿಕೆ ನೀಡಿದೆ. ಪ್ರಕಟಣೆ ಹೊರಡಿಸಿದ ಒಂದು ವಾರದೊಳಗೆ ತಮ್ಮ ಸ್ವಂತ ಸ್ಥಳಗಳಲ್ಲಿ ಬಿಡಾಡಿ ಹಸು ಮತ್ತು ಹಂದಿಗಳನ್ನು ಕೂಡಿ ಹಾಕಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಸ್ತೆಗಳಲ್ಲಿ ಬಿಡಾಡಿ ಹಸು, ಹಂದಿಗಳು ಕಂಡುಬಂದರೆ ಮಾಲೀಕರ ವಿರುದ್ಧ ಯಾವುದೇ ಸೂಚನೆ ನೀಡದೆ, ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಟಿವಿ ಭಾರತ್ ವರದಿ: ಈ ಹಿಂದೆ ಸರಸ್ವತಿ ಪುರಂ ಪಾರ್ಕ್ನ ಪಕ್ಕದ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದ ವೃದ್ಧೆಯ ಮೇಲೆ ರಸ್ತೆಯಲ್ಲಿ ನಿಂತಿದ್ದ ಗೂಳಿ ದಾಳಿ ಮಾಡಿತ್ತು. ವೃದ್ಧೆ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಸಿಸಿಟಿವಿ ವಿಡಿಯೋಸಮೇತ ಈಟಿವಿ ಭಾರತ್ ಸುದ್ದಿ ಮಾಡಿತ್ತು. ದನಕರುಗಳನ್ನು ಬೀದಿಯಲ್ಲಿ ಬಿಡಬಾರದು, ಬಿಟ್ಟರೆ ಅವುಗಳನ್ನು ಹಿಡಿದು ಪಿಂಜಿರಾಪೋಲ್ಗೆ ಕಳುಹಿಸಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಮೈಸೂರಿನಲ್ಲಿ ವೃದ್ಧೆಯ ಮೇಲೆ ಗೂಳಿ ದಾಳಿ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ