ಮೈಸೂರು: ಸಫಾರಿ ಪ್ರಿಯರಿಗೆ ಗುಡ್ ನ್ಯೂಸ್ ನೀಡಲು ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯ ಮುಂದಾಗಿದೆ. ಆಫ್ರಿಕನ್ ಮಾದರಿಯಲ್ಲಿ ತೆರೆದ ವಾಹನದಲ್ಲಿ ಸಫಾರಿ ನಡೆಸುವ ಚಿಂತನೆ ಬಗ್ಗೆ ನಡೆಸಲಾಗಿದೆ.
ಈ ಬಗ್ಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿ, ಚಾಮರಾಜೇಂದ್ರ ಮೃಗಾಲಯ ವ್ಯಾಪ್ತಿ ವಿಸ್ತರಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ. 116 ಎಕರೆ ವ್ಯಾಪ್ತಿ ಪ್ರದೇಶದಲ್ಲಿರುವ ರೇಸ್ ಕೋರ್ಸ್‌ವರೆಗೂ ಮೃಗಾಲಯದ ಆವರಣ ವಿಸ್ತರಿಸಲು ನಿರ್ಧಾರಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ಕಳೆದ ಬಾರಿ ನಡೆದ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ. ರೇಸ್ ಕೋರ್ಸ್‌ನ ಗುತ್ತಿಗೆ ಅವಧಿ 2021ರ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆ ರೇಸ್‌ಕೋರ್ಸ್ ಸ್ಥಳವನ್ನು ಮೃಗಾಲಯ ವಿಸ್ತರಣೆಗೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಯುವರಾಜನ ಬ್ಯಾಂಕ್ ಖಾತೆಯಿಂದ ಸ್ಯಾಂಡಲ್ವುಡ್ ಸ್ವೀಟಿ ಖಾತೆಗೆ 1 ಕೋಟಿ ರೂ. ವರ್ಗಾವಣೆ..!?
ಇದರಿಂದಾಗಿ ಮೃಗಾಲಯದಲ್ಲಿನ ಪ್ರಾಣಿ - ಪಕ್ಷಿಗಳ ಸಂಖ್ಯೆ ಇಮ್ಮಡಿಯಾಗುವುದಲ್ಲದೇ ಮೈಸೂರಿನ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಮೃಗಾಲಯ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಕಳೆದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆದಿದೆ. ರೇಸ್‌ಕೋರ್ಸ್ ಆವರಣಕ್ಕೆ ಮೃಗಾಲಯದಿಂದಲೇ ಸಂಪರ್ಕ ಕಲ್ಪಿಸಲು ನಿರ್ಧಾರ ಮಾಡಲಾಗಿದೆ. ಅಂಡರ್‌ಪಾಸ್ ಅಥವಾ ಮೇಲ್ಸೆತುವೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.