ಮೈಸೂರು: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಯುವ ಸಿಇಟಿ ಪರೀಕ್ಷೆಯು ಜುಲೈ ಇಂದು ಮತ್ತು ನಾಳೆ ನಡೆಯಲಿದ್ದು, ಪರೀಕ್ಷೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಬುಧವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್ಬುಕ್ ಪೇಜ್ ಲೈವ್ನಲ್ಲಿ ಮಾತನಾಡಿದ ಅವರು, ಕೋವಿಡ್-19 ಹರಡುತ್ತಿರುವ ಕಾರಣ ಎಲ್ಲಾ ರೀತಿಯ ಕ್ರಮ ವಹಿಸಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಗೊಂದಲ ಹಾಗೂ ಆತಂಕಕ್ಕೆ ಒಳಗಾಗದೆ ಪರೀಕ್ಷೆಯನ್ನು ಬರೆಯಲು ಹಾಜರಾಗಬಹುದು ಎಂದರು.
ಜುಲೈ.30 ರಂದು ಜೀವಶಾಸ್ತ್ರ ಹಾಗೂ ಗಣಿತ, 31 ರಂದು ಭೌತಶಾಸ್ತ್ರ ಮತ್ತು ರಾಸಾಯನಿಶಾಸ್ತ್ರ ಪರೀಕ್ಷೆ ನಡೆಯಲಿವೆ. ಜಿಲ್ಲೆಯಲ್ಲಿ ಒಟ್ಟು 26 ಪರೀಕ್ಷಾ ಕೇಂದ್ರಗಳಿದ್ದು, ಮೈಸೂರು ನಗರದಲ್ಲಿ 20 ಹಾಗೂ ತಾಲೂಕುಗಳಲ್ಲಿ 6 ಪರೀಕ್ಷಾ ಕೇಂದ್ರಗಳಿವೆ. ಒಟ್ಟು 10,368 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತೀ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ ಅಳತೆಯಲ್ಲಿ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲಾಗಿದ್ದು, ಸೆಕ್ಷನ್ 144 ಜಾರಿಯಲ್ಲಿರುತ್ತದೆ. ವಿದ್ಯಾರ್ಥಿಗಳ ಪೋಷಕರು ಹಾಗು ಇತರರು ಗುಂಪು ಸೇರುವುದನ್ನು ತಡೆಗಟ್ಟಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್- ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಆರಂಭಕ್ಕೂ ಮುನ್ನ ಎರಡು ಗಂಟೆಗಳ ಮುಂಚಿತವಾಗಿ ಹಾಜರಿರಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸರಬೇಕು ಹಾಗೂ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಸಿಇಟಿ ಪ್ರವೇಶ ಪತ್ರದ ಜೊತೆಗೆ ಕಡ್ಡಾಯವಾಗಿ ಯಾವುದಾದರೂ ಒಂದು ಗುರುತಿನ ಚೀಟಿ ತರಬೇಕು ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಪೀಡಿತ 3 ವಿದ್ಯಾರ್ಥಿಗಳಿದ್ದು, ಅವರನ್ನು ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಇರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.