ಮೈಸೂರು : ಕೋವಿಡ್ ವಾರಿಯರ್ ಆಗಿದ್ದ ಪತಿಯನ್ನು ಕಳೆದುಕೊಂಡ ನಗರದ ಮಹಿಳೆಯೊಬ್ಬರು ಸ್ವಯಂ ಉದ್ಯೋಗ ವಿಸ್ತರಣೆಗಾಗಿ ಸಾಲ ಪಡೆಯಲು ಬ್ಯಾಂಕ್ಗಳಿಗೆ ಅಲೆದು ಹೈರಾಣಾಗಿದ್ದರು. ಕೊನೆಗೂ ಛಲ ಬಿಡದ ಮಹಿಳೆ ಬ್ಯಾಂಕ್ ಮುಂಭಾಗ ಏಕಾಂಗಿಯಾಗಿ ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಸರಸ್ವತಿಪುರಂ ನಿವಾಸಿ ಮಂಜುಳಾ ಎಂಬುವರ ಪತಿ ಕೋವಿಡ್ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ಕೋವಿಡ್ ತಗುಲಿದ್ದು, ಹೃದಯಘಾತದಿಂದ ಮೃತಪಟ್ಟಿದ್ದರು. ಮಂಜುಳಾ ಅವರು, ಮಣ್ಣಿನಿಂದ ಆಭರಣ ತಯಾರಿಸುವ ಕಲೆಯನ್ನು ಕಲಿತಿದ್ದಾರೆ. ನೀಲಿ ಕಲಾ ಕ್ರಿಯೇಷನ್ಸ್ ಎಂಬ ಸಂಸ್ಥೆಯ ಸಂಸ್ಥಾಪಕಿ ಆಗಿದ್ದಾರೆ.
ಪತಿಯ ನಿಧನದ ಬಳಿಕ ಜೀವನೋಪಾಯಕ್ಕಾಗಿ ಮಣ್ಣಿನ ಆಭರಣಗಳನ್ನು ತಯಾರಿಸಲು ಯಂತ್ರೋಪಕರಣಗಳನ್ನು ಖರೀದಿಸಲು ₹14.25 ಲಕ್ಷ ಸಾಲಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್ಗೆ ಅಕ್ಟೋಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ 3 ತಿಂಗಳುಗಳ ಕಾಲ ಆ ಬ್ಯಾಂಕ್ಗೆ ಅಲೆದಿದ್ದಾರೆ. ಆದರೆ, ಬ್ಯಾಂಕ್ನವರು ಇವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಇದರಿಂದ ನೊಂದ ಮಹಿಳೆ ಸೋಮವಾರ ಬೆಳಗ್ಗೆ ಬ್ಯಾಂಕ್ ಮುಂಭಾಗ ಮೆಟ್ಟಿಲ ಮೇಲೆ ಕುಳಿತು ಏಕಾಂಗಿಯಾಗಿ ಧರಣಿ ನಡೆಸಿದ್ದಾರೆ. ಇವರ ಧರಣಿಯಿಂದ ಎಚ್ಚೆತ್ತ ಬ್ಯಾಂಕ್ ಅಧಿಕಾರಿಗಳು ಸಾಲ ನೀಡುವುದಾಗಿ ಮಹಿಳೆಗೆ ಭರವಸೆ ನೀಡಿದ್ದಾರೆ.
ಫೇಸ್ಬುಕ್ನಲ್ಲಿ ಬೇಸರ ವ್ಯಕ್ತಪಡಿಸಿದ ಮಹಿಳೆ : ಸಾಲ ಪಡೆಯಲು ಮಂಜುಳಾ ಅವರು ತಾವು ಪಟ್ಟ ಕಷ್ಟವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವರು ಸ್ವಂತ ಉದ್ದಿಮೆಯನ್ನು ವಿಸ್ತರಿಸಲು 2021ರ ಅಕ್ಟೋಬರ್ 18ರಂದು 'ಪಿಎಂಇಜಿಪಿ ಯೋಜನೆ' (ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ)ಅಡಿ ಸಾಲಕ್ಕೆ ಅರ್ಜಿ ಹಾಕಿದ್ದರಂತೆ. ಆದರೆ, ಅದು ತಿರಸ್ಕೃತವಾಗಿದೆ ಎಂದು ಡಿಸೆಂಬರ್ 15ರಂದು ಇವರಿಗೆ ಕರೆ ಬಂದಿದೆ.
ನನ್ನನ್ನು ಅವಮಾನಿಸಿದ ವ್ಯವಸ್ಥೆಗೆ ಧಿಕ್ಕಾರ : ಈ ಸಂಬಂಧ ಶಾಖೆಯ ವ್ಯವಸ್ಥಾಪಕರನ್ನು ಭೇಟಿಯಾದರೂ ಯಾವ ಫಲವೂ ಸಿಗಲಿಲ್ಲ. ನಂತರ ಸಂಸದ ಪ್ರತಾಪ್ ಸಿಂಹ ಅವರ ಸಲಹೆಯಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಬಳಿ ಹೋಗಿದ್ದಾರೆ. ನಂತರ ಅವರು 'ಮುಂದ್ರಾ ಯೋಜನೆ' ಅಡಿ ಸಾಲ ನೀಡುವುದಾಗಿ ಭರವಸೆ ನೀಡಿದರು. ಆದರೆ, ಅದೂ ಆಗಲಿಲ್ಲ. ಕೊನೆ ಪಕ್ಷ ಮನುಷ್ಯ ಜಾತಿ ಎಂದು ನೋಡದೆ ನನ್ನನ್ನು ಅವಮಾನಿಸಿದ ವ್ಯವಸ್ಥೆಗೆ ಧಿಕ್ಕಾರ ಎಂದು ಅವರು ಫೇಸ್ಬುಕ್ ಪೇಜ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತಿ ಇದ್ದಾಗಿನಿಂದಲೂ ಮಣ್ಣಿನ ಅಭರಣಗಳನ್ನು ತಯಾರಿಸುತ್ತಿದ್ದೆ. ಇದು ನನ್ನ ಹವ್ಯಾಸವಾಗಿತ್ತು. ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿ ಎನ್ನುವುದು ನನ್ನ ಗಂಡನ ಆಸೆಯಾಗಿತ್ತು. ಪತಿಯ ಮರಣದ ನಂತರ ಮನೆಯಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಆಭರಣಗಳ ತಯಾರಿಕೆಯ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿದ್ದೇನೆ.
ಜತೆಗೆ ಯುವತಿಯರಿಗೆ ತರಬೇತಿ ಕೂಡ ನೀಡುತ್ತಿದ್ದೇನೆ. ಇದನ್ನು ವಿಸ್ತರಿಸಲು ಸಾಲಕ್ಕಾಗಿ ಬ್ಯಾಂಕ್ಗಳಿಗೆ ಅಲೆದು ಸುಸ್ತಾಗಿ ಪರಿಹಾರ ಸಿಗದೆ ಪ್ರತಿಭಟನೆಗೆ ಮುಂದಾದೆ ಎಂದು ಮಂಜುಳಾ ತಿಳಿಸಿದ್ದಾರೆ. ಪತಿ ಸಾಯುವ ಮುನ್ನ ಅವರ ಜತೆ ನೋಡಿದ ಕೊನೆಯ ಸಿನಿಮಾ ಕನ್ನಡದ 'ಆ್ಟಕ್ಟ್ 1978' ನನ್ನ ಪ್ರತಿಭಟನೆಗೆ ಪ್ರೇರಣೆಯಾಯಿತು ಎಂದು ಮಂಜುಳಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Maoists killed : ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳ ಸಾವು, ಓರ್ವ ಪೊಲೀಸ್ಗೆ ಗಾಯ