ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಆಫ್ಘಾನಿಸ್ತಾನ ವಿದ್ಯಾರ್ಥಿಯಾದ ಸಯ್ಯದ್ ಕುದ್ರತ್ ಹಶಮಿ 2 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಆಫ್ಘಾನಿಸ್ತಾನದ ವಿದ್ಯಾರ್ಥಿಯಾದ ಸಯ್ಯದ್ ಕುದ್ರತ್ ಹಶಮಿ ಅವರು ಅಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ 2 ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನ ಪಡೆದಿದ್ದಾರೆ. ತಮಗೆ ಚಿನ್ನದ ಪದಕ ದೊರೆತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದು, ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಬಹಳ ತೊಂದರೆಯಾಗಿತ್ತು, ಲೈಬ್ರರಿ ಒಪನ್ ಇರಲಿಲ್ಲ, ಓದಲು ಆಗುತ್ತಿರಲಿಲ್ಲ. ಈ ಪದಕವನ್ನು ಭಾರತದ ಜನರಿಗೆ ಸಲ್ಲಿಸುತ್ತೇನೆ. ಇಲ್ಲಿನ ಜನರು ಬುದ್ದಿವಂತರು, ಮೈಸೂರಿನ ಜನರ ಸಂಸ್ಕೃತಿ ಇಷ್ಟ ಎಂದು ಸಂತಸಗೊಂಡರು.
ಆಫ್ಘಾನಿಸ್ತಾನದ ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿ : ಆಫ್ಘಾನಿಸ್ತಾನದಲ್ಲಿ ಸದ್ಯಕ್ಕೆ ನಿರುದ್ಯೋಗದ ಸಮಸ್ಯೆ ಇದ್ದು, ಜನರು ಬದುಕಲು ಕಷ್ಟ ಪಡುತ್ತಿದ್ದಾರೆ. ಹಸಿವಿನಿಂದ ಸಾಯುತ್ತಿದ್ದಾರೆ. ಜೀವನ ನಡೆಸಲು ಕಿಡ್ನಿ ಮಾರುತ್ತಿದ್ದಾರೆ. ತಮ್ಮ ಮಕ್ಕಳನ್ನು ಮಾರುತ್ತಿದ್ದಾರೆ ಎಂದ ಅವರು, ಅಮೆರಿಕಾದವರು ಆಫ್ಘಾನಿಸ್ತಾನ ಬಿಟ್ಟು ಹೋಗಬಾರದಿತ್ತು.
ಈಗ ಯಾವ ಸಹಾಯವನ್ನೂ ಅಮೆರಿಕ ಮಾಡುತ್ತಿಲ್ಲ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ. ಕೇವಲ ರಾಜಕೀಯ ಪಕ್ಷ ಬದಲಾಗಿರುವುದು ದೇಶ ಇನ್ನೂ ಹಾಗೆ ಇದೆ. ಅದು ಮತ್ತೆ ಸರಿಹೋಗುತ್ತದೆ ಎಂಬ ನಂಬಿಕೆ ನಮಗೆ ಇದೆ. ಇತರ ದೇಶಗಳ ಸಹಾಯ ನಮಗೆ ಬೇಕು ಎಂದು ಅಲ್ಲಿನ ಪರಿಸ್ಥಿತಿ ವಿವರಿಸಿದರು. ಸದ್ಯಕ್ಕೆ ಪಿಹೆಚ್ಡಿ ಮಾಡಬೇಕು. ಹಾಗಾಗಿ, ಇಲ್ಲೇ ಇರುತ್ತೇನೆ. ಪಿಹೆಚ್ಡಿ ಮುಗಿದ ನಂತರ ನನ್ನ ದೇಶಕ್ಕೆ ಹೋಗಿ ಅಲ್ಲಿನ ಜನರಿಗೆ ಸೇವೆ ಸಲ್ಲಿಸುತ್ತೇನೆ ಎಂದರು.