ಮೈಸೂರು: ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಸಂಭ್ರಮಕ್ಕೆ ಕಾರಣರಾದವರು ಲೆಕ್ಕವಿಲ್ಲದಷ್ಟು ಸ್ವಾತಂತ್ರ್ಯ ಹೋರಾಟಗಾರರು. ಸ್ವಾತಂತ್ರ್ಯ ಸಿಕ್ಕ ನಂತರ ಯಾವುದಾದರೊಂದು ಮಾರ್ಗದ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ ಸಮಾಜ ಸೇವಕರು, ಪರಿಸರ ಪ್ರೇಮಿಗಳು. ಅಂತಹ ಉದಾತ್ತ ಮನಸ್ಸುಗಳ ಪೈಕಿ ಸಾಂಸ್ಕೃತಿಕ ನಗರಿಯ ರಾಘವನ್ ಕೂಡ ಒಬ್ಬರು. ಹೌದು, ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು, ಅವುಗಳ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ ಪರಿಸರ ಪ್ರೇಮಿ ರಾಘವನ್.
ನಗರದ ಸಯಾಜಿ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ರಘುಲಾಲ್ ಮೆಡಿಕಲ್ ಸ್ಟೋರ್ ನಡೆಸುತ್ತಾ ಬಂದಿರುವ ರಾಘವನ್ ಕಳೆದ 12 ವರ್ಷಗಳಿಂದ ಮೈಸೂರಿನ ಖಾಲಿ ಜಾಗಗಳಲ್ಲಿ, ಚಾಮುಂಡಿ ಬೆಟ್ಟ ಸೇರಿದಂತೆ ಪ್ರಮುಖ ಸರ್ಕಾರಿ ಸ್ಥಳಗಳಲ್ಲಿ, ಪಾದಚಾರಿ ಮಾರ್ಗ ಬದಿ, ಲಲಿತ್ ಮಹಲ್ ಸುತ್ತಮುತ್ತಲಿನ ಪ್ರದೇಶ, ಪ್ರಮುಖ ರಸ್ತೆಯ ಅಕ್ಕಪಕ್ಕ ಸೇರಿದಂತೆ ಬಹುತೇಕ ಕಡೆಗಳಲ್ಲಿ ಇಲ್ಲಿಯವರೆಗೆ ಸುಮಾರು 43,000 ಗಿಡಗಳನ್ನು ನೆಟ್ಟಿದ್ದಾರೆ. ಅವುಗಳಿಗೆ ಕಬ್ಬಿಣದ ಟ್ರೀ ಗಾರ್ಡ್ನ್ಗಳನ್ನು ಹಾಕಿದ್ದಾರೆ. ಪ್ರತಿ ಬೇಸಿಗೆಯಲ್ಲೂ ಸ್ವಂತ ಖರ್ಚಿನಲ್ಲಿ ನೀರನ್ನು ಹಾಕಿ ಪೋಷಿಸುತ್ತ ಬಂದಿರುವ ರಾಘವನ್ ತಮ್ಮ ಉದ್ಯಮದ ಜೊತೆ ಬೆಳಗಿನ ಹೊತ್ತು ಪರಿಸರ ರಕ್ಷಣೆಗೆ ಸಮಯ ಮೀಸಲಿಟ್ಟು, ಸದ್ದಿಲ್ಲದೇ ಈ ಉತ್ತಮ ಕಾಯಕವನ್ನು ಮಾಡುತ್ತಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವಗಾಡಿ: ಜೀವನ ಬಂಡಿ ದೂಡಲು ತಳ್ಳುವ ಗಾಡಿಯಲ್ಲಿ ಮಳೆ-ಬಿಸಿಲು ಎನ್ನದೇ ಬಡ ಜನರು ವ್ಯಾಪಾರ ನಡೆಸುತ್ತಾರೆ. ತಳ್ಳುವ ಗಾಡಿಯನ್ನು ಬಾಡಿಗೆಗೆ ತೆಗೆದುಕೊಂಡು ಬಂದು ವ್ಯಾಪಾರ ಮಾಡುತ್ತಿರುತ್ತಾರೆ. ಬಹುತೇಕ ಮಂದಿಗೆ ವ್ಯಾಪಾರ ಉತ್ತಮವಾಗದೇ ತಳ್ಳುವ ಗಾಡಿಗೆ ಬಾಡಿಗೆ ಕಟ್ಟಲು ಕಷ್ಟಪಡುತ್ತಿರುತ್ತಾರೆ. ಇದನ್ನು ಕಂಡ ರಾಘವನ್ ಅವರು ಇಲ್ಲಿನ ಕುವೆಂಪು ನಗರ, ಜಿಲ್ಲಾಧಿಕಾರಿ ಕಚೇರಿ ಬಳಿ, ಒಂಟಿಕೊಪ್ಪಲಿನ ವೆಂಕಟೇಶ್ವರ ದೇವಸ್ಥಾನದ ಬಳಿ ಸೇರಿದಂತೆ ಹಲವು ಕಡೆ ರಸ್ತೆ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಉಚಿತವಾಗಿ ಮೇಲುಹೊದಿಕೆಯಿರುವ ತಳ್ಳುವ ಗಾಡಿ ನೀಡಿದ್ದಾರೆ. ಗಾಡಿಯ ಮೇಲ್ಭಾಗದಲ್ಲಿ ಮಾಲೀಕರ ಹೆಸರು ಸಹ ಹಾಕಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಧ್ವಜಾರೋಹಣ ನೆರವೇರಿಸಿದ ಶಾಸಕ ಅನಿಲ್ ಬೆನಕೆ
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶ ಎಲ್ಲ ಕ್ಷೇತ್ರದ ಸಾಧಕರನ್ನು ಗುರುತಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮ ಬಹಳ ಅರ್ಥಪೂರ್ಣ ಎಂದು ಈಟಿವಿ ಭಾರತಕ್ಕೆ ನೀಡಿರುವ ಸಂದರ್ಶನದಲ್ಲಿ ರಾಘವನ್ ತಿಳಿಸಿದ್ದಾರೆ.