ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಜಂಬೂಸವಾರಿಯನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು , ಮಧ್ಯಾಹ್ನ 2:59 ರಿಂದ 3:20 ರ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಆನಂತರ ಮಧ್ಯಾಹ್ನ 3:40 ರಿಂದ 4:15 ರ ನಡುವೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅಭಿಮನ್ಯು ಆನೆ ಮೇಲಿರುವ ಚಿನ್ನದ ಅಂಬಾರಿಯಲ್ಲಿರುವ ನಾಡ ದೇವಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಹಾಗೂ ಇತರ ಗಣ್ಯರಿಂದ ಪುಷ್ಪಾರ್ಚನೆ ಮಾಡಿ ಸರಳ ದಸರಾದ ಮೆರವಣಿಗೆಗೆ ಚಾಲನೆ ನೀಡಲಿದ್ದು , ಮುಖ್ಯ ಅತಿಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುಷ್ಪಾರ್ಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೆರವಣಿಗೆಯಲ್ಲಿ ಏನಿರುತ್ತೆ?
ಈ ಬಾರಿ ಸರಳ ಜಂಬೂಸವಾರಿಯಲ್ಲಿ 4 ಕಲಾತಂಡ ಅಶ್ವರೋಹಿ ದಳದ 2 ತುಕಡಿ, 1 ಸ್ತಬ್ಧ ಚಿತ್ರ , ಕರ್ನಾಟಕ ಪೋಲಿಸ್ ಬ್ಯಾಂಡ್ ಆನೆಗಾಡಿಯಲ್ಲಿ ಸಾಗಲಿದ್ದು , ಅಭಿಮನ್ಯು ಆನೆಯೊಂದಿಗೆ ಕುಮ್ಕಿ ಆನೆಗಳಾಗಿ ವಿಜಯ ಮತ್ತು ಕಾವೇರಿ ಆನೆ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆ ಜೊತೆ ಸಾಗಲಿದೆ.
ಇದರ ಹಿಂದೆ ಅಶ್ವಾರೋಹಿ ದಳದ ಒಂದು ತುಕಡಿ, ಮೂರು ಫಿರಂಗಿ ಗಾಡಿ, ಅರಣ್ಯ ಇಲಾಖೆಯ ವೈದ್ಯರ ತಂಡ, ಆಂಬುಲೆನ್ಸ್ ಸಾಗಲಿದೆ. ಕೇವಲ ಅರಮನೆ ಆವರಣದಲ್ಲಿ 500 ಮೀಟರ್ ಅಂತರದಲ್ಲಿ ಜಂಬೂಸವಾರಿ ನಡೆಯಲಿದ್ದು, 30 ರಿಂದ 40 ನಿಮಿಷದಲ್ಲಿ ಜಂಬೂಸವಾರಿ ಮೆರವಣಿಗೆ ಮುಗಿಯಲಿದೆ ಎಂದು ನಗರ ಪೋಲಿಸ್ ಕಮಿಷನರ್ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.