ಮೈಸೂರು : ಕೋವಿಡ್ ಸಂಕಷ್ಟದಿಂದ ಪಾರಾಗಲು ಶ್ರೀರಾಮಮಂದಿರ ಹಾಗೂ ಗ್ರಂಥಾಲಯದಲ್ಲಿದ್ದ ಅಮೂಲ್ಯ ಕಲಾಕೃತಿಗಳನ್ನು ಕಳವು ಮಾಡಿ, ಆನ್ಲೈನ್ ಹರಾಜಿಗಿಟ್ಟಿದ್ದ ಜವಳಿ ವ್ಯಾಪಾರಿ ಹಾಗೂ ಆತನ ಸ್ನೇಹಿತನನ್ನು ಮೈಸೂರು ಪೊಲೀಸರು ಬಂಧಿಸಿ, ಕಲಾಕೃತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಡಿಗೆಯನ್ನೂ ಪಾವತಿಸಲಾಗದೇ ಪರದಾಡುತ್ತಿದ್ದ ಜವಳಿ ಅಂಗಡಿ ವ್ಯಾಪಾರಿಯು ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ಶ್ರೀರಾಮಮಂದಿರ ಹಾಗೂ ಸಮೀಪದ ಗ್ರಂಥಾಲಯದಲ್ಲಿ 10 ಕಲಾಕೃತಿಗಳನ್ನು ಕದ್ದಿದ್ದರು.
ಬಳಿಕ ವ್ಯಾಪಾರಿಯು ವೆಬ್ಸೈಟ್ವೊಂದರಲ್ಲಿ ಕಲಾಕೃತಿಗಳನ್ನು ಹರಾಜಿಗೆ ಇಟ್ಟಿದ್ದು, ಹಳೆಯ ಮನೆ ನೆಲಸಮ ಮಾಡುವಾಗ ಸಿಕ್ಕಿದ್ದವು ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದ.
4.50 ಲಕ್ಷ ರೂಪಾಯಿವರೆಗೂ ಹರಾಜು ಕೂಗಲಾಗಿದೆ ಎಂಬ ಮಾಹಿತಿ ತಿಳಿದ ಬಳಿಕ ಖರೀದಿದಾರರಂತೆಯೇ ಫೇಸ್‌ಬುಕ್ ಮೂಲಕವೇ ಸಂಪರ್ಕಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದೇಗುಲ ಮತ್ತು ಗ್ರಂಥಾಲಯದ ಸಿಬ್ಬಂದಿಗೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಕಲಾಕೃತಿಗಳನ್ನು ಮಂಗಳವಾರ ಹಸ್ತಾಂತರಿಸಿದ್ದಾರೆ.
ವಿಷ್ಣುವಿನ ದಶಾವತಾರ ಚಿತ್ರಗಳಿದ್ದ ಈ ಕಲಾಕೃತಿಗಳ ರೇಖೆಗಳ ಮೇಲೆ ಚಿನ್ನದ ಲೇಪನವಿದೆ. ನೂರು ವರ್ಷಕ್ಕೂ ಹಿಂದೆ ಮಹಾರಾಜರು ಕಾಣಿಕೆಯಾಗಿ ಈ ಕೃತಿಗಳನ್ನು ಅರ್ಪಿಸಿದ್ದರು ಎಂದು ದೇಗುಲದ ಸಿಬ್ಬಂದಿ ತಿಳಿಸಿದ್ದಾರೆ. ಪ್ರಕರಣವು ತನಿಖೆ ಹಂತದಲ್ಲಿರುವುದರಿಂದ ಆರೋಪಿಗಳ ಹೆಸರು ಮತ್ತು ಇತರ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಅಪ್ಪನ ಮೃತದೇಹದೊಂದಿಗೆ 3 ತಿಂಗಳು ಕಳೆದ ಪುತ್ರ: ಬೆಳಕಿಗೆ ಬಂದ ವಿಚಿತ್ರ ಪ್ರಕರಣ