ಮೈಸೂರು: ಮನೆ ಮನೆಗೆ ಗ್ಯಾಸ್ ಸಂಪರ್ಕ ಯೋಜನೆಗೆ ಅನುಮತಿ ನೀಡದಂತೆ ಶಾಸಕ ರಾಮದಾಸ್ ಪತ್ರ ಬರೆದಿರುವ ಹಿನ್ನೆಲೆ ಸಂಸದ ಪ್ರತಾಪಸಿಂಹ ಕೆಂಡಾಮಂಡಲರಾಗಿದ್ದು, ಅವರ ವಿರುದ್ಧ ಕಿಡಿಕಾರಿದ್ದಾರೆ.
ಶಾಸಕ ಎಸ್.ಎ. ರಾಮದಾಸ್ ವಿರುದ್ಧ ಅಸಮಾಧಾನಗೊಂಡಿರುವ ಸಂಸದ ಪ್ರತಾಪಸಿಂಹ ಮಾಧ್ಯಮಗಳೊಂದಿಗೆ ಮಾತನಾಡಿ, ಗ್ಯಾಸ್ ನೀಡುವ ಯೋಜನೆಗೆ ಅನುಮತಿ ನೀಡದಂತೆ ಶಾಸಕರು ಪತ್ರ ಬರೆದಿದ್ದಾರೆ. ಅವರು ಮೋದಿಗಿಂತ ಸೀನಿಯರ್, ಅವರಿಗಿಂತ ಬುದ್ಧಿವಂತ, ಜ್ಞಾನಿಗಳು ಆಗಿದ್ದಾರೆ. ಕೇವಲ ಬ್ಯಾನರ್ನಲ್ಲಿ ಮೋದಿ ಫೋಟೋ ಹಾಕಿಕೊಂಡು ಉತ್ಸವ ಮಾಡಿದರೆ ಆಗುವುದಿಲ್ಲ. ಮೋದಿ ಯೋಜನೆಗಳನ್ನು ವಿರೋಧಿಸಿದ್ರೆ, ಜನ ಪಾಠ ಕಲಿಸುತ್ತಾರೆ ಎಂದು ಶಾಸಕ ರಾಮದಾಸ್‌ಗೆ ಪ್ರತಾಪ್‌ಸಿಂಹ ಟಾಂಗ್ ಕೊಟ್ಟಿದ್ದಾರೆ.
ಯೋಜನೆಯನ್ನು ಕಾಂಗ್ರೆಸ್, ಜೆಡಿಎಸ್ ಶಾಸಕರು ವಿರೋಧಿಸಿಲ್ಲ. ನಮ್ಮದೇ ಪಕ್ಷದ ಶಾಸಕರು ವಿರೋಧಿಸಿದ್ದಾರೆ. ಅವರನ್ನು ತಾಯಿ ಚಾಮುಂಡೇಶ್ವರಿ, ಮೈಸೂರಿನ ಜನ ನೋಡಿಕೊಳ್ಳುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ಯಾವಾಗ ಬಂದರೂ ಯಶಸ್ವಿಯಾಗಿ ನಿಭಾಯಿಸಲು ಸಚಿವರಿಗೆ ಸಿಎಂ ಸೂಚನೆ
ಈ ರೀತಿ ಚಿಲ್ಲರೆ ರಾಜಕಾರಣ ಮಾಡಬೇಡಿ, ಇದ್ಯಾವುದಕ್ಕೂ ನಾನು ಕೇರ್ ಮಾಡುವುದಿಲ್ಲ. ಕೆ.ಆರ್. ಕ್ಷೇತ್ರದ ಕಸವನ್ನ ಎತ್ತಿಸೋದು ನಾನೆ. ಈ ಯೋಜನೆಯನ್ನೂ ನಾನೆ ಕಂಪ್ಲೀಟ್ ಮಾಡುತ್ತೇನೆ. ಯಾವುದಕ್ಕೂ ನಾನು ಕೇರ್ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ಸ್ಥಳೀಯರಿಗೆ ಸಚಿವ ಸ್ಥಾನ ನೀಡಲು ದನಿಗೂಡಿಸದ ಆರೋಪದ ಬಗ್ಗೆ ಮಾತನಾಡಿದ ಅವರು, ನಾನು ಈಗಾಗಲೇ ಹೇಳಿರುವಂತೆ ವಿಧಾನಸೌಧದ ವಾಸ್ತು ಸರಿ ಇಲ್ಲ. ಗೆದ್ದ 224 ಮಂದಿ ಶಾಸಕರೆಲ್ಲಾ ನಾನು ಸಚಿವ ಆಗ್ಬೇಕು ಅಂತ ಬಯಸ್ತಾರೆ. ಆದ್ರೆ ಕೇಂದ್ರ, ರಾಜ್ಯ ನಾಯಕರು ತೀರ್ಮಾನ ಮಾಡಿ ಮಂತ್ರಿ ಮಾಡ್ತಾರೆ. ಸ್ಥಳೀಯರಿಗೆ ಸಚಿವ ಸ್ಥಾನ ನೀಡಬೇಕಾ, ಬೇಡವಾ ಅನ್ನೋದನ್ನ ಪಕ್ಷ ತೀರ್ಮಾನ ಮಾಡುತ್ತೆ ಎಂದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ