ಮೈಸೂರು: ಜಮೀನಿಗೆ ನುಗ್ಗಿದ ಕಾಡಾನೆಗಳ ತುಳಿತಕ್ಕೆ ಒಳಗಾದ ರೈತನ ಕಾಲು ಅರ್ಧಕ್ಕೆ ಮುರಿದಿರುವ ಘಟನೆ ನಂಜನಗೂಡು ತಾಲೂಕಿನ ಆಕಳ ಗ್ರಾಮದಲ್ಲಿ ನಡೆದಿದೆ. ಶೆಟ್ಟಹಳ್ಳಿ ಗ್ರಾಮದ ಬೋಳಯ್ಯ ಎಂಬ ರೈತ(65)ಆನೆಯ ತುಳಿತಕ್ಕೆ ಒಳಗಾದವರು.
ರೈತ ಬೋಳಯ್ಯ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆಗಳ ಹಿಂಡು ಜಮೀನಿಗೆ ನುಗ್ಗಿ ದಾಂಧಲೆ ಮಾಡಿವೆ. ರೈತನು ದೂರಿನಿಂದ ಬೆದರಿಸಲು ಹೋಗಿದ್ದ ವೇಳೆ ಕಾಡಾನೆಗಳು ಎರಗಿ ಬಂದಿವೆ. ಈ ವೇಳೆ ರೈತ ಕೆಳಗಡೆ ಬಿದ್ದಿದ್ದಾನೆ. ಕಾಡಾನೆಯೊಂದು ರೈತನ ಕಾಲನ್ನು ತುಳಿದ ಪರಿಣಾಮ ರೈತನ ಬಲಗಾಲು ಅರ್ಧಕ್ಕೆ ಮುರಿದಿದೆ. ಈ ಸಂದರ್ಭದಲ್ಲಿ ಅಕ್ಕಪಕ್ಕದ ಜಮೀನಿನ ರೈತರು ಬಂದು ಕಾಡಾನೆಗಳನ್ನು ಓಡಿಸಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು, ಹುಲ್ಲಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರ ಮೇಲೆ ಆಗಿಂದಾಗ್ಗೆ ಕಾಡಾನೆಗಳು ದಾಳಿ ಮಾಡುತ್ತಿದ್ದು, ಇವುಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಆನೆಗಳ ದಾಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರ ಮತ್ತು ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕಾಲು ಕಳೆದುಕೊಂಡ ರೈತನ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಇತ್ತೀಚಿನ ಘಟನೆ- ಬೆಳೆ ಕಾವಲಿಗೆ ಹೋಗಿದ್ದ ರೈತ ಕಾಡಾನೆಗೆ ಬಲಿ: ಜಮೀನಿನಲ್ಲಿ ಬೆಳೆ ಕಾವಲಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಆತ ಜಮೀನಿನಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಎಚ್ಡಿ ಕೋಟೆ ತಾಲೂಕಿನ ಮಾಸ್ತಿಗುಡಿಯ ಪುನರ್ವಸತಿ ತಾಣದ ಬಳಿ ಇತ್ತೀಚಿಗೆ ನಡೆದಿತ್ತು.
ಎಚ್ಡಿ ಕೋಟೆ ತಾಲೂಕಿನ ಮಾಸ್ತಿಗುಡಿ ಗ್ರಾಮದ ರೈತ ವಸಂತ (35) ಈತ ತನ್ನ ಜಮೀನಿನಲ್ಲಿ ಹಾಕಿದ್ದ ಮುಸುಕಿನ ಜೋಳವನ್ನು ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಲು ಕಾವಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಗುರುವಾರ ತಡರಾತ್ರಿ ಆಹಾರ ಅರಸಿ ನಾಗರಹೊಳೆ ಕಾಡಿನಿಂದ ಕಾಡಾನೆ ಬಂದಿತ್ತು. ಈ ಆನೆಯನ್ನು ಹಿಮ್ಮೆಟ್ಟಿಸಲು ಹೋದ ರೈತ ವಸಂತ್ ಮೇಲೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ರೈತ ವಸಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನು ಮಾಸ್ತಿಗುಡಿ ಹಾಡಿಯ ನಿವಾಸಿಗಳು ಹಾಗೂ ರೈತರು ಭೀಮನಹಳ್ಳಿಯ ಬಳಿ ರಸ್ತೆ ತಡೆದು, ಪ್ರತಿಭಟನೆ ನಡೆಸಿದ್ದರು. ಮೃತ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಕಾಡು ಪ್ರಾಣಿಗಳು ಬರದಂತೆ ತಡೆಯಬೇಕು ಎಂದು ಆಗ್ರಹಿಸಿದ್ದರು.
ಇದನ್ನೂಓದಿ:ಮೈಸೂರು: ಕಾಡಾನೆ ದಾಳಿಗೆ ರೈತ ಬಲಿ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪರಿಶೀಲನೆ