ಮೈಸೂರು: ಕೊರೊನಾ ವೈರಸ್ ಒಂದೆರಡು ತಿಂಗಳಿಗೆ ನಾಶವಾಗುವುದಿಲ್ಲ. ಇದು ನಮ್ಮ ಜೊತೆ ಒಂದೆರಡು ವರ್ಷ ಇರಬಹುದು. ಇದನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕೊರೊನಾ ವೈರಸ್ ಜೊತೆ ಬದುಕುವ ಪರ್ಯಾಯ ಮಾರ್ಗವನ್ನು ಕಂಡುಹಿಡಿಯಬೇಕೆಂದು ಹಿರಿಯ ವೈದ್ಯ ಡಾ. ಯೋಗಣ್ಣ ಹೇಳಿದರು.
ನಗರದಲ್ಲಿ ಲಾಕ್ಡೌನ್ ಹೇರಿಕೆ ಹಾಗೂ ಈ ವೈರಾಣು ಹರಡುವಿಕೆ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಕೊರೊನಾ ವೈರಸ್ ಸೋಂಕನ್ನು ಹೋಗಲಾಡಿಸಲು 2 ತಿಂಗಳು ಲಾಕ್ಡೌನ್ ಮಾಡಿದ್ದು ಸರಿ. ಆದರೆ, ಲಾಕ್ಡೌನ್ ವಿಸ್ತರಿಸಿದರೆ ತೊಂದರೆ ಹೆಚ್ಚು. ಏಕೆಂದರೆ ಸಂಘ ಜೀವಿಯಾದ ಮನುಷ್ಯ ಯಾವಾಗಲೂ ಕ್ರಿಯಾಶೀಲನಾಗಲು ಇಚ್ಛಿಸುತ್ತಾನೆ. ಆದರೆ, ಮನೆಯಲ್ಲಿರುವುದರಿಂದ ಅವನ ಮನಸ್ಸಿನಲ್ಲಿ ಆತಂಕದ ಭಾವನೆಗಳು ಶುರುವಾಗುತ್ತವೆ. ಅದು ಕೊರೊನಾಕ್ಕಿಂತ ಅಪಾಯವಾದದ್ದು.
ಒಂದೆರಡು ತಿಂಗಳಿಗೆ ಇದು ನಾಶವಾಗುತ್ತದೆ ಎಂದು ಅಂದುಕೊಂಡಿದ್ದರೆ ಅದು ನಮ್ಮ ಭ್ರಮೆ. ಇದು ಒಂದೆರಡು ವರ್ಷಗಳವರೆಗೂ ಇರಬಹುದು. ಈ ವೈರಸ್ ಸಂಪೂರ್ಣವಾಗಿ ನಾಶವಾಗುವುದಿಲ್ಲ. ಹಾಗಾಗಿ ಸರ್ಕಾರ ಮತ್ತು ತಜ್ಞರು ಕೊರೊನಾ ಜೊತೆ ಬದುಕುವ ಪರ್ಯಾಯ ಮಾರ್ಗವನ್ನು ಸೃಷ್ಟಿಸಬೇಕು.
ಲಾಕ್ಡೌನ್ ಮುಂದುವರೆಸುವುದು ಒಳ್ಳೆಯದಲ್ಲ. ಈ ಬಗ್ಗೆ ಮೇ 3ರ ನಂತರ ಕೊರೊನಾ ಜೊತೆ ಬದುಕುವುದು ಹೇಗೆ ಎಂಬ ಬಗ್ಗೆ ಪರ್ಯಾಯ ಮಾರ್ಗ ಹುಡುಕಿ ಜನರಿಗೆ ಸರ್ಕಾರ ಮಾರ್ಗದರ್ಶನ ಮಾಡಬೇಕು ಎಂದು ಡಾ. ಯೋಗಣ್ಣ ಮನವಿ ಮಾಡಿದರು.