ಮೈಸೂರು: ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು.
ನಗರದ ಕಲಾಮಂದಿರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ 100 ಮಂದಿ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಜನಪ್ರತಿನಿಧಿಗಳು ಸನ್ಮಾನ ಮಾಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ ಮಾತನಾಡಿ, ಸೈನಿಕರ ಹಾಗೂ ಶಿಕ್ಷಕರಿಂದ ದೇಶದ ಭವಿಷ್ಯ ಸುಭದ್ರವಾಗಿರುತ್ತದೆ. ಸೈನಿಕರು ದೇಶ ಕಾಯ್ದರೆ, ಶಿಕ್ಷಕರು ದೇಶ ಭವಿಷ್ಯ ರೂಪಿಸುವ ಮಕ್ಕಳ ಭವಿಷ್ಯ ರೂಪಿಸುತ್ತಾರೆ ಎಂದರು.
ಅಂದು ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡ ಅವರು 1ಲಕ್ಷ ಶಿಕ್ಷಕರ ಹುದ್ದೆ ಭರ್ತಿ ಮಾಡಿ ಮೆಚ್ಚುಗೆಗೆ ಪಾತ್ರರಾದರು. ಒಂದು ರೂಪಾಯಿ ಲಂಚ ಸ್ವೀಕರಿಸದೇ ಶಿಕ್ಷಕರ ಹುದ್ದೆ ತುಂಬಿಸಿ ಉದ್ಯೋಗ ನೀಡಿದರೆಂದು ಅವರನ್ನು ಸ್ಮರಿಸಿದರು.
ಸಂಸದ ಪ್ರತಾಪಸಿಂಹ ಮಾತನಾಡಿ, ವಿವಿ ಮಟ್ಟದಲ್ಲಿ ಪ್ರಾಧ್ಯಾಪಕರಿಗೆ ಒಳ್ಳೆಯ ಸಂಬಳ ಬರುತ್ತದೆ. ಯುಜಿಸಿ ಮಟ್ಟದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಸಂಬಳ ನೀಡಬೇಕೆಂದು ಸಚಿವರಿಗೆ ಶಿಕ್ಷಕರ ಪರವಾಗಿ ಮನವಿ ಮಾಡಿದರು. ಡೈರಿಗೆ ಹಾಲು ಹಾಕಿ ದನ ಮೇಯಿಸುತ್ತಿದ್ದ ನಾನು ಈ ಹಂತಕ್ಕೆ ತಲುಪಲು ಶಿಕ್ಷಕರೇ ಕಾರಣ ಎಂದು ಸ್ಮರಿಸಿದರು.