ಮೈಸೂರು: 'ನನ್ನ ಗಮನ ಕೊರೊನಾ ನಿಯಂತ್ರಣ ಮಾತ್ರ. ಯಾವುದೇ ವೈಯಕ್ತಿಕ ಆರೋಪಗಳಿಗೆ ಗಮನ ಕೊಡುವುದಿಲ್ಲ' ಎಂದು ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಸರ್ಕಾರದಿಂದ ಬಿಡುಗಡೆಯಾಗಿರುವ ಹಣದ ಲೆಕ್ಕವನ್ನು ಪತ್ರದ ಮೂಲಕ ಸ್ಪಷ್ಟಪಡಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉತ್ತರ ನೀಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಕೋವಿಡ್ ನಿರ್ವಹಣೆಗೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದ ಹಣದ ಲೆಕ್ಕ ನೀಡುವಂತೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರನ್ನು ಕೇಳಿದ್ದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದು, ವಿಪತ್ತು ನಿರ್ವಹಣಾ ಬಳಕೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಗೆ ಬಿಡುಗಡೆಯಾದ ಹಣವನ್ನು ಯಾವ ರೀತಿ ಬಳಕೆ ಮಾಡಲಾಯಿತು ಎಂಬುದರ ವಿವರ ಕೊಟ್ಟಿದ್ದಾರೆ.
ಇದ್ರ ಜೊತೆಗೆ, "ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ವೈಯಕ್ತಿಕ ಆರೋಪಗಳನ್ನು ಮಾಡಲಾಗುತ್ತಿದೆ. ಇದನ್ನು ನಾನು ಗಮನಕ್ಕೆ ತೆಗೆದುಕೊಳ್ಳದೆ ಕೋವಿಡ್ ನಿರ್ವಹಣೆಯಲ್ಲಿ ಗಮನಹರಿಸುತ್ತೇನೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
"ವೈಯಕ್ತಿಕ ಆರೋಪಗಳಿಂದ ಜಿಲ್ಲಾಡಳಿತದ ಕೆಲಸಕ್ಕೆ ಧಕ್ಕೆ ತರಲು ಸಾಧ್ಯವಾಗದ ಕಾರಣ ಈಗ ಕೊರೊನಾ ನಿರ್ವಹಣೆ ಕುರಿತು ಸುಳ್ಳು ಮತ್ತು ಬೇಜವಾಬ್ದಾರಿ ಹೇಳಿಕೆಗಳು ಹೊರ ಬರುತ್ತಿವೆ. ಈ ಹೇಳಿಕೆಗಳು ಸುಳ್ಳಾಗಿದ್ದರೂ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳಿಂದ ಬರುತ್ತಿವೆ. ಇದರಿಂದ ಜನರಲ್ಲಿ ಕೋವಿಡ್ ಬಗ್ಗೆ ಭಯ ಹೆಚ್ಚಾಗುತ್ತದೆ. ಅವರ ಆತ್ಮವಿಶ್ವಾಸ ಕುಗ್ಗುತ್ತದೆ. ಅಲ್ಲದೇ ಕೊರೊನಾ ವಿರುದ್ಧದ ಹೋರಾಟಕ್ಕೆ ತೊಂದರೆಯನ್ನು ಉಂಟು ಮಾಡುತ್ತದೆ" ಎಂದು ಸಿಂಧೂರಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: "ಔಷಧಿಗೆ ಅಡ್ಡ ಬಂದ ಕಾನೂನು ಸ್ವಿಮ್ಮಿಂಗ್ ಪೂಲ್ಗೆ ಯಾಕಿಲ್ಲ": ಸಿಂಧೂರಿ ವಿರುದ್ಧ ಸಂಸದ 'ಪ್ರತಾಪ'