ಮೈಸೂರು: ಕೇಂದ್ರದಿಂದ ಬಂದಿರುವ ತಂಡ ಜುಬಿಲಂಟ್ ತನಿಖೆಗಾಗಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸ್ಪಷ್ಪಪಡಿಸಿದ್ದಾರೆ. ಕೋವಿಡ್-19 ಹೆಚ್ಚಾಗಿರುವ ಜಿಲ್ಲೆಗಳಿಗೆ ಕೇಂದ್ರ ತಂಡ ಭೇಟಿ ನೀಡಿರುವಂತೆ, ಮೈಸೂರಿಗೆ ಕೂಡ ಒಂದು ತಂಡ ಭೇಟಿ ನೀಡಿದೆ. ಆದರೆ ಈ ತಂಡ ಜುಬಿಲಂಟ್ ಪ್ರಕರಣದ ತನಿಖೆಗಾಗಿ ಬಂದಿಲ್ಲ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮ, ಕೋವಿಡ್-19 ಆಸ್ಪತ್ರೆ ಸ್ಥಿತಿಗತಿ ಹಾಗೂ ಜಿಲ್ಲೆಯ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ ಎಂದರು.
ಜುಬಿಲಂಟ್ ಕಾರ್ಖಾನೆಯ ಸಂಪೂರ್ಣ ನೌಕರರ ಪರೀಕ್ಷೆ ಮುಗಿದಿದೆ. ಪಾಸಿಟಿವ್ ಪ್ರಕರಣಗಳ ಹತ್ತಿರ ಸಂಪರ್ಕದಲ್ಲಿದ್ದ ಸಂಬಂಧಿಗಳ ಪರೀಕ್ಷೆ ನಡೆಯುತ್ತಿದೆ. ಕೋವಿಡ್ 19 ಆಸ್ಪತ್ರೆಯಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದವರು ಗುಣಮುಖರಾಗುತ್ತಿದ್ದಾರೆ. ಅವರನ್ನು ವಾಡ್೯ಗೆ ಹಾಕಲಾಗಿದೆ. ಮತ್ತೊಬ್ಬರು ಕೂಡ ಚೇತರಿಕೆಯಾಗಲಿದ್ದಾರೆ ಎಂದು ಹೇಳಿದರು. ಮೈಸೂರಿನಲ್ಲಿ ಪತ್ತೆಯಾದ 88 ಪ್ರಕರಣಗಳ ಪೈಕಿ, 33 ಮಂದಿ ಗುಣಮುಖರಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.