ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಜಂಬೂ ಸವಾರಿಗೆ ಕೇವಲ ಮೂರು ದಿನಗಳು ಬಾಕಿ ಇದ್ದು, ಇಂದು ಜಂಬೂಸವಾರಿ ಮೆರವಣಿಗೆಯ ತಾಲೀಮು ನಡೆಸಲಾಯಿತು.
ಇಂದು ಮುಂಜಾನೆ ಗಜಪಡೆ, ಅಶ್ವಾರೋಹಿ ಪಡೆ, ಪೊಲೀಸ್ ವಾದ್ಯವೃಂದ ಸೇರಿದಂತೆ ಎಲ್ಲ ತಂಡಗಳು ಜಂಬೂಸವಾರಿ ದಿನದಂದು ನಡೆಯುವ ರೀತಿಯಲ್ಲಿ ತಾಲೀಮು ನಡೆಸಿದರು. ಜಂಬೂಸವಾರಿ ಅಂಬಾವಿಲಾಸ ಅರಮನೆ ಅಂಗಳದಲ್ಲಿ ಮುಖ್ಯಮಂತ್ರಿಗಳು ಹಾಗೂ ಗಣ್ಯರು ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೊದಲ ಹಂತದ ತಾಲೀಮನ್ನು ಪೂರ್ಣಗೊಳಿಸಲಾಯಿತು.
ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಉಪ ಪೊಲೀಸ್ ಆಯುಕ್ತ ಮುತ್ತುರಾಜ್ ಪುಷ್ಪಾರ್ಚನೆ ಮಾಡಿ ಪೊಲೀಸ್ ಸಿಬ್ಬಂದಿ ಹಾಗೂ ಅಶ್ವಾರೋಹಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಮಾತನಾಡಿ, ಜಂಬೂಸವಾರಿಯ ದಿನದಂದು ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಹೀಗಾಗಿ ಮೂರ್ನಾಲ್ಕು ಬಾರಿ ಅರಮನೆ ಅಂಗಳದಲ್ಲಿ ತಾಲೀಮು ನಡೆಸಲಾಗುವುದು, ಇಂದಿನ ತಾಲೀಮಿನಲ್ಲಿ ಎಲ್ಲ ಆನೆ ಹಾಗೂ ಪೊಲೀಸ್ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಎಲ್ಲ ಆನೆಗಳು ಶಾಂತಚಿತ್ತವಾಗಿ ತಾಲೀಮಿನಲ್ಲಿ ಭಾಗವಹಿಸಿವೆ. ಅರ್ಜುನ ಗಜ ಗಾಂಭೀರ್ಯದಿಂದ ತನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದಾನೆ ಎಂದು ಹಿರಿಯ ಅರಣ್ಯಾಧಿಕಾರಿ ಅಲೆಕ್ಸಾಂಡರ್ ತಿಳಿಸಿದರು.
ಎಲ್ಲ ಆನೆಗಳು ಆರೋಗ್ಯವಾಗಿವೆ ಹಾಗೂ ಉತ್ತಮವಾಗಿ ತಾಲೀಮಿನಲ್ಲಿ ಭಾಗವಹಿಸಿ ಜಂಬೂಸವಾರಿಯನ್ನು ಯಶಸ್ವಿಗೊಳಿಸಲಿವೆ ಎಂದು ಆನೆ ವೈದ್ಯ ಡಾ. ನಾಗರಾಜ್ ತಿಳಿಸಿದರು.
ದೇಶದ ಯಾವುದೇ ಮೇಯರ್ಗೆ ಸಿಗದಂತ ಸ್ಥಾನಮಾನ ಮೈಸೂರಿನ ಜಂಬೂ ಸವಾರಿಯಲ್ಲಿ ಸಿಗಲಿದೆ. ಇದೊಂದು ಅಪರೂಪದ ಕ್ಷಣ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಸಂತಸ ಹಂಚಿಕೊಂಡರು.