ETV Bharat / state

ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನಿಲ್ಲ : ಈತನ ಸಾಹಸಗಾಥೆ ಇನ್ನು ನೆನಪು ಮಾತ್ರ

author img

By ETV Bharat Karnataka Team

Published : Dec 4, 2023, 10:49 PM IST

Updated : Dec 4, 2023, 11:08 PM IST

ವಿಶ್ವವಿಖ್ಯಾತ ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ ಅರ್ಜುನ ಸೋಮವಾರ ಉಸಿರು ನಿಲ್ಲಿಸಿದೆ.

mysore-dasara-elephant-arjun-died
ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನಿಲ್ಲ : ಈತನ ಸಾಹಸದ ಹಿನ್ನೋಟ ಇಲ್ಲಿದೆ

ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನಿಲ್ಲ

ಮೈಸೂರು : ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ, ಕಾಡಾನೆಗಳನ್ನು ಸೆರೆ ಹಿಡಿಯುವುದರಲ್ಲಿ ಸೈ ಎನಿಸಿಕೊಂಡಿದ್ದ, ವಿವಿಧ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ಅರ್ಜುನ ಆನೆ ಸೋಮವಾರ ಮೃತಪಟ್ಟಿದೆ. ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಅರ್ಜುನ ಉಸಿರು ನಿಲ್ಲಿಸಿದೆ. ಅರ್ಜುನನ ಸ್ವಭಾವ, ಸಾಹಸ, ಧೈರ್ಯ, ಕಾರ್ಯಾಚರಣೆಯ ಶೈಲಿ, ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ರಾಜಗಾಂಭೀರ್ಯ, ಗಜಪಡೆಯ ಹಿರಿಯ ಅಣ್ಣನಂತಿದ್ದ ಅರ್ಜುನನ ಕುರಿತ ಮಾಹಿತಿ ಇಲ್ಲಿದೆ.

ಅರ್ಜುನನ ದುರಂತ ಸಾವು : ದಸರಾ ಗಜಪಡೆಯ ಹಿರಿಯಣ್ಣನಂತಿದ್ದ ಅರ್ಜುನ ಆನೆ ಇನ್ನಿಲ್ಲ. ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಒಂಟಿ ಸಲಗದ ಜತೆ ಕಾಳಗಕ್ಕಿಳಿದು ದಾರುಣ ಸಾವು ಕಂಡಿದೆ. ಇತರ ಮೂರು ಸಾಕಾನೆಗಳೊಂದಿಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರ್ಜುನನ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿತ್ತು. ಇತರ ಮೂರು ಸಾಕಾನೆಗಳು ಮತ್ತು ಮಾವುತರು ಅಲ್ಲಿಂದ ಓಡಿ ದಾಳಿಯಿಂದ ತಪ್ಪಿಸಿಕೊಂಡರು. ಆದರೆ 64 ವರ್ಷದ ಅರ್ಜುನ ದಿಟ್ಟತನದಿಂದ ಅದನ್ನು ಎದುರಿಸುವ ಸಾಹಸಕ್ಕಿಳಿಯಿತು. ಈ ಕಾದಾಟದಲ್ಲಿ ಹೊಟ್ಟೆ ಭಾಗಕ್ಕೆ ಕಾಡಾನೆ ತಿವಿದ ಪರಿಣಾಮ ಗಂಭೀರ ಗಾಯಗೊಂಡ ಅರ್ಜುನ ಕೊನೆ ಉಸಿರೆಳೆದಿದೆ.

ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ : 2012ರಿಂದ 2019ರ ವರೆಗೆ ಒಟ್ಟು ಎಂಟು ಬಾರಿ ಅಂಬಾರಿ ಹೊತ್ತು ಅರ್ಜುನ ಸೈ ಎನಿಸಿಕೊಂಡಿದ್ದ. ಬಳಿಕ 2019ರಲ್ಲಿ 60 ವರ್ಷ ದಾಟಿದ ಹಿನ್ನೆಲೆ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯುಗೆ ವಹಿಸಲಾಗಿತ್ತು. ಬಳಿಕ ಅರ್ಜುನ, ನಿಶಾನೆ ಆನೆಯಾಗಿ ಗಜಪಡೆಯನ್ನು ಮುನ್ನಡೆಸುತ್ತಿತ್ತು.

mysore-dasara-elephant-arjuna-died
ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ

ಅರ್ಜುನನನ್ನು ಪುಂಡಾನೆಗಳನ್ನು ಹಿಡಿಯಲು, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ನಿರಂತರವಾಗಿ ಬಳಸಿಕೊಳ್ಳಲಾಗುತ್ತಿತ್ತು. ಅಂಬಾರಿ ಆನೆ ಬಲರಾಮನ ನಿವೃತ್ತಿಯ ನಂತರ ಅಂಬಾರಿಯನ್ನು ಹೊರುವ ಜವಾಬ್ದಾರಿ ಅರ್ಜುನನ ಪಾಲಿಗೆ ಒದಗಿಬಂದಿತ್ತು. ಇದಕ್ಕೂ ಮುನ್ನ ಒಂದು ಬಾರಿ ಅಂಬಾರಿ ಹೊತ್ತು ಸಾಗಿತ್ತು. ಬಳಿಕ ದೊಡ್ಡಕೆರೆ ಮೈದಾನದಲ್ಲಿ ತನ್ನ ಮಾವುತನನ್ನೇ ತುಳಿದು ಸಾಯಿಸಿದ ಪ್ರಕರಣದ ಸಂಬಂಧ ಹಲವು ವರ್ಷಗಳ ಕಾಲ ಅರ್ಜುನನನ್ನು ಗಜಪಡೆಯಿಂದ ದೂರವಿಡಲಾಗಿತ್ತು. ಆದರೆ ಮಾವುತ ದೊಡ್ಡ ಮಾಸ್ತಿ ಅವರ ಗರಡಿಯಲ್ಲಿ ಪಳಗಿದ ಅರ್ಜುನ 2012ರಿಂದ ಗಜಪಡೆಯ ಭಾಗವಾಗಿದ್ದ.

ತೂಕದಲ್ಲೂ ಅಗ್ರಗಣ್ಯ : ಅಂದಾಜು 6 ಸಾವಿರ ಕಿಲೋ ತೂಗುತ್ತಿದ್ದ ಅರ್ಜುನ, ಗಜಪಡೆಯ ಎಲ್ಲಾ ಆನೆಗಳಿಗಿಂತ ಹೆಚ್ಚು ತೂಕದ ಆನೆಯಾಗಿ ಗುರುತಿಸಿಕೊಂಡಿತ್ತು. 2010ರಲ್ಲಿ 4541 ಕೆಜಿ ತೂಕವಿದ್ದ ಅರ್ಜುನ, 2011ರಲ್ಲಿ 5055 ಕೆಜಿಗೆ ತೂಕ ಏರಿಸಿಕೊಂಡಿದ್ದ. ಅಲ್ಲಿಂದ 2019ರ ವರೆಗೆ ಸುಸೂತ್ರವಾಗಿ ಅಂಬಾರಿ ಹೊತ್ತು ಗಮನ ಸೆಳೆದಿದ್ದ. 2023ರ ದಸರಾ ವೇಳೆಗೆ ಅರ್ಜುನ 5680 ಕಿಲೋ ಹೊಂದಿದ್ದ. ಮಾವುತ ದೊಡ್ಡ ಮಾಸ್ತಿ ಅವರ ನಿಧನದ ಬಳಿಕ ವಿನು ಅವರು ಮಾವುತರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಕಾಡಾನೆ ಜತೆಗಿನ ಕಾದಾಟದಲ್ಲಿ ತನ್ನ ನೆಚ್ಚಿನ ಆನೆಯನ್ನು ಉಳಿಸಿಕೊಳ್ಳಲಾಗದ ದು:ಖದಿಂದ ವಿನು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ಕಾಕನಕೋಟೆಯ ಭೀಮ ಈ ಅರ್ಜುನ : ಹೆಚ್.ಡಿ. ಕೋಟೆಯ ಬಳ್ಳೆ ಶಿಬಿರದ ಅರ್ಜುನ 2.80 ಮೀಟರ್ ಎತ್ತರ, 3.75 ಮೀಟರ್ ಉದ್ದ ಹೊಂದಿತ್ತು. 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾಕ್ಕೆ ಬೀಳಿಸಿ ಅರ್ಜುನನನ್ನು ಸೆರೆಹಿಡಿಯಲಾಗಿತ್ತು.

ಪುಂಡಾನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ನಿಸ್ಸೀಮ : ದಸರಾ ಹೊರತು ಪಡಿಸಿ ಇತರೆ ದಿನಗಳಲ್ಲಿ ಬಳ್ಳೆ ಆನೆ ಶಿಬಿರದಲ್ಲಿ ವಾಸ್ತವ್ಯ ಹೂಡುವ ಅರ್ಜುನ ಎಲ್ಲಿಯೇ ಹುಲಿ ಸೆರೆ, ಪುಂಡಾನೆ ಸೆರೆ ಕಾರ್ಯಾಚರಣೆ ಇರಲಿ ಅಲ್ಲಿಗೆ ಒಯ್ಯಲಾಗುತ್ತಿತ್ತು. ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಒಡಿಶಾದಲ್ಲೂ ಆನೆಗಳನ್ನು ಹಿಡಿಯಲು ಬಳಸಿರುವುದು ಅರ್ಜುನನ ಶೌರ್ಯಕ್ಕೆ ಸಾಕ್ಷಿ.

2019ರಲ್ಲಿ ನಾಲ್ಕು ಜನರನ್ನು ಕೊಂದಿದ್ದ ಹುಲಿಯನ್ನು ಸೆರೆ ಹಿಡಿಯಲು ಅರ್ಜುನನ್ನು ಬಳಸಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಹುಲಿಯ ಹೆಜ್ಜೆಗುರುತು ಆಧರಿಸಿ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಇದಕ್ಕೆ ಮೆಚ್ಚಿ ಸರ್ಕಾರ ಅರ್ಜುನ ಮತ್ತು ಮಾವುತ ವಿನುಗೆ ಪ್ರಶಸ್ತಿ ಪತ್ರ ನೀಡಿತ್ತು. ಇದೀಗ ಇಂಥಹದ್ದೇ ಕಾರ್ಯಾಚರಣೆಯಲ್ಲಿ ಅರ್ಜುನ ಪ್ರಾಣ ತೆತ್ತಿದೆ.

ದಸರಾದ ಪ್ರಮುಖ ಆಕರ್ಷಣೆ : ಈ ಬಾರಿ ದಸರಾದಲ್ಲಿ 14 ಆನೆಗಳನ್ನು ಜಂಬೂಸವಾರಿ ಮೆರವಣಿಗೆಗೆ ಕರೆತರಲಾಗಿತ್ತು. ಅದರಲ್ಲಿ ಪ್ರಮುಖ ಆಕರ್ಷಣೆ ಗಜಪಡೆಯ ಹಿರಿಯಣ್ಣನಂತಿದ್ದ ಅರ್ಜುನ. ಮಾವುತರು ಕಾವಾಡಿಗರನ್ನು ಬಿಟ್ಟು ಬೇರೆಯವರು ಹತ್ತಿರ ಹೋಗಲು ಸಾಧ್ಯವೇ ಇರಲಿಲ್ಲ. ಆದರೆ ಜಂಬೂಸವಾರಿಯ ಸಂದರ್ಭದಲ್ಲಿ ಲಕ್ಷಾಂತರ ಜನರ ಮಧ್ಯೆ ಶಾಂತನಾಗಿ ಸಾಗುತ್ತಿದ್ದ. ಜಂಬೂಸವಾರಿಯಲ್ಲಿ ರಾಜಗಾಂಭೀರ್ಯದಿಂದ ಅಂಬಾರಿ ಹೊತ್ತು ಸಾಗುವುದನ್ನು ನೋಡುವುದೇ ಒಂದು ಸೊಗಸಾಗಿತ್ತು.

ಸಾಂಪ್ರದಾಯಕ ಪೂಜೆ ಸಲ್ಲಿಸಿ ನಾಳೆ ಅಂತ್ಯಕ್ರಿಯೆ : ಕಾಡಾನೆ ಕಾದಾಟದಲ್ಲಿ ಮೃತಪಟ್ಟಿರುವ ಅರ್ಜುನ ಆನೆಯನ್ನು ಮಂಗಳವಾರ ಹಾಸನ ಜಿಲ್ಲೆಯ ಸಕಲೇಶಪುರ ಬಳಿಯ ಹೆಸಲೂರು ಅರಣ್ಯ ಪ್ರದೇಶದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅರಣ್ಯ ಇಲಾಖೆ ಆನೆ ದಂತಗಳನ್ನು ತೆಗೆದುಕೊಂಡ ನಂತರ ಅರ್ಜುನ ಆನೆಯನ್ನು ಸಮಾಧಿ ಮಾಡಲಾಗುವುದು ಎಂದು ದಸರಾ ಗಜಪಡೆಗೆ ಪೂಜೆ ಸಲ್ಲಿಸುತ್ತ ಬಂದಿರುವ ಅರ್ಚಕ ಪ್ರಹ್ಲಾದ್​ ರಾವ್ ಈಟಿವಿ ಭಾರತ್ ಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಕಾಡಾನೆ ದಾಳಿ; ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು, ಕಣ್ಣೀರಿಟ್ಟ ಮಾವುತರು

Last Updated : Dec 4, 2023, 11:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.