ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ದಸರಾಗೆ ಭರದ ಸಿದ್ಧತೆ ನಡೆಯುತ್ತಿದೆ. ಜಂಬೂಸವಾರಿಯಲ್ಲಿ ಭಾಗವಹಿಸುವ ಅಭಿಮನ್ಯು ನೇತೃತ್ವದ 14 ಆನೆಗಳಿಗೆ ತಾಲೀಮು ನಡೆಯುತ್ತಿದೆ. ಜೊತೆಗೆ ಈ ಆನೆಗಳಿಗೆ ವಿವಿಧ ರೀತಿಯ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತಿದೆ. ಒಟ್ಟು 14 ಆನೆಗಳಿಗೆ ನಿತ್ಯ ಎರಡು ಬಾರಿ ಆಹಾರ ನೀಡಲಾಗುತ್ತಿದ್ದು, ಈ ಆಹಾರವನ್ನು ತಯಾರಿಸಲು ಬರೋಬ್ಬರಿ 20 ಗಂಟೆಗಳು ಹಿಡಿಯುತ್ತವೆ.
ಈ ಆನೆಗಳಿಗೆ ದಿನನಿತ್ಯ ಮುಂಜಾನೆ 7 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ತಾಲೀಮು ನಡೆಸಲಾಗುತ್ತಿದೆ. ಈ ಸಂಬಂಧ ಆನೆಗಳಿಗೆ ಎರಡು ಹೊತ್ತು ಆಹಾರವನ್ನು ನೀಡಲಾಗುತ್ತಿದೆ. ಆನೆಗಳ ಆಹಾರ ವಿಷಯದಲ್ಲೂ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಆನೆಗಳಿಗೆ ಮೇವಿನ ಜೊತೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.
ಆನೆಗಳಿಗೆ ಆಹಾರ ತಯಾರಿ : ಬೆಳಗ್ಗೆ ತಾಲೀಮು ಶುರುವಾಗುವ ಮುನ್ನ ಹಾಗೂ ಸಂಜೆ ತಾಲೀಮು ಮುಗಿದ ಆನೆಗಳಿಗೆ ಆಹಾರವನ್ನು ನೀಡಲಾಗುತ್ತದೆ. ಆನೆಗಳ ಆಹಾರ ತಯಾರಿಗೆ ಸುಮಾರು 20 ಗಂಟೆ ಸಮಯ ತಗಲುವುದು. ಆಹಾರ ತಯಾರಾದ ನಂತರ ಅದನ್ನು ತಣ್ಣಗಾಗಿಸಿ, ತರಕಾರಿ ಹಾಗೂ ಔಷಧ ಮಿಶ್ರಣ ಮಾಡಿ ಆಹಾರವನ್ನು ಮುದ್ದೆ ರೀತಿ ಮಾಡಿ ಆನೆಗೆ ನೀಡಲಾಗುತ್ತದೆ. 20 ಗಂಟೆಗಳ ಕಾಲ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದರ ಜೊತೆಗೆ ಕಾವಾಡಿಗರು ಆನೆಗಳಿಗೆ ಹಸಿರು ಹುಲ್ಲು, ಕಬ್ಬು, ಭತ್ತದ ಹುಲ್ಲಿನೊಂದಿಗೆ, ಬೆಲ್ಲ ಮುಂತಾದವುಗಳನ್ನು ನೀಡುತ್ತಾರೆ.
ಅರಣ್ಯ ಅಧಿಕಾರಿಗಳಿಂದ ನಿಗಾ : ಆನೆಗಳ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಅದು ದಸರಾ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೋಡಿ ಸೋಮೇಶ್ವರ ದೇವಾಲಯದ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಆನೆಗಳ ಮೇಲೆ ಅರಣ್ಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಜೊತೆಗೆ ಅಡುಗೆ ಕೋಣೆ, ಉಗ್ರಾಣ, ಹುಲ್ಲಿನ ಟೆಂಟ್ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಡಿಸಿಎಫ್ ಸೌರವ್ ಕುಮಾರ್, ದಸರಾ ಆನೆಗಳಿಗೆ ಪ್ರತಿನಿತ್ಯ ವಿಶೇಷ ಆಹಾರಗಳನ್ನು ತಯಾರಿಸಲಾಗುತ್ತದೆ. ಪ್ರತಿನಿತ್ಯ ರಾಗಿಮುದ್ದೆ, ಕಾಳು ಮತ್ತು ತರಕಾರಿಗಳಿಂದ ತಯಾರಿಸಿದ ಆಹಾರ ನೀಡಲಾಗುತ್ತಿದೆ. ಜೊತೆಗೆ ಭತ್ತ, ಬೆಲ್ಲ, ಹಸಿ ಸೊಪ್ಪು ಸೇರಿದಂತೆ ವಿಶೇಷ ಆಹಾರವನ್ನು ನೀಡಲಾಗುತ್ತದೆ. ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಹೆಚ್ಚಿನ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಈ ಮೂಲಕ ಜಂಬೂಸವಾರಿಗೆ ಗಜಪಡೆಯನ್ನು ತಯಾರು ಮಾಡಲಾಗುತ್ತಿದೆ ಎಂದು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : 4ನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ರೆಡಿಯಾಗುತ್ತಿರುವ ಕ್ಯಾಪ್ಟನ್ ಅಭಿಮನ್ಯು: ವಿಡಿಯೋ