ಮೈಸೂರು : ಕೊರೊನಾ ಸೋಂಕಿತರು ಸ್ಥಳೀಯ ಬಿಜೆಪಿ ಶಾಸಕ ರಾಮದಾಸ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಗರದ ಕೃಷ್ಣರಾಜ ಕ್ಷೇತ್ರದ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ವಿದ್ಯಾರಣ್ಯಪುರಂನಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದ್ದರಿಂದ ಹೋಮ್ಕ್ವಾರಂಟೈನ್ಗೆ ಒಳಗಾಗಿದ್ದರು. ಆದರೆ, ಸೋಂಕಿತರ ಮನೆಯ ಅಕ್ಕಪಕ್ಕ ಹಾಗೂ ಮನೆಯ ಒಳಗೆ ಸ್ಯಾನಿಟೈಸ್ ಮಾಡಿಲ್ಲ. ಒಂದು ವಾರದಿಂದ ಸಂಗ್ರಹವಾದ ಕಸವನ್ನು ತೆಗೆದುಕೊಂಡು ಹೋಗಿಲ್ಲ. ಸಹಾಯವಾಣಿಗೆ ಕರೆ ಮಾಡಿದ್ರೆ, ಯಾರೂ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಕೋಪಗೊಂಡ ಸೋಂಕಿತ ಕುಟುಂಬದ ಸದಸ್ಯರು ಕಷ್ಟ ಕೇಳಲು ಹೋದ ಶಾಸಕ ರಾಮದಾಸ್ರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಮದಾಸ್, ಕಳೆದ 4 ತಿಂಗಳಿನಿಂದ ಇದಕ್ಕಾಗಿ ದುಡಿಯುತ್ತಿದ್ದೇವೆ. ಆದರೂ ಜನರ ಮಾತನ್ನು ಕೇಳಬೇಕಾಯಿತು ಎಂದು ಹೇಳಿ ಅಲ್ಲೇ ಇದ್ದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಈ ಸಮಯದಲ್ಲಿ ಶಾಸಕರ ಬೆಂಬಲಿಗನೊಬ್ಬ ಸೋಂಕಿತ ಕುಟುಂಬಕ್ಕೆ ಸೀನ್ ಕ್ರಿಯೇಟ್ ಮಾಡಬೇಡಿ ಎಂದು ಹೇಳಿದ್ದಕ್ಕೆ, ಸೋಂಕಿತ ಕುಟುಂಬದವರು ನೀವು ಸೀನ್ ಕ್ರಿಯೇಟ್ ಮಾಡುತ್ತಿರುವುದು. ಸೋಂಕಿತರಿಗೆ ಸರಿಯಾದ ವ್ಯವಸ್ಥೆಯನ್ನು ಆರೋಗ್ಯ ಅಧಿಕಾರಗಳು ಮಾಡುತ್ತಿಲ್ಲ. ಶಾಸಕರು ಸರಿಯಾಗಿ ಗಮನಿಸುತ್ತಿಲ್ಲ ಎಂದು ಹೇಳಿ ಪುನಃ ರಾಮದಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು.