ಮೈಸೂರು: ತಮ್ಮ ಪಾಲಿಗೆ ಬರಬೇಕಿದ್ದ ಆಸ್ತಿ ಹಕ್ಕಿಗಾಗಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲವೆಂದು ಮನನೊಂದ ಮಹಿಳೆವೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲ್ಯಾಣಗಿರಿ ನಿವಾಸಿ ಶಬರೀನ್ ಬಾನು (31) ಆತ್ಮಹತ್ಯೆಗೆ ಶರಣಾದವಳು. 12 ವರ್ಷಗಳ ಹಿಂದೆ ಸೈಯದ್ ಅಹಮದ್ ಆಲಿ ಎಂಬಾತನೊಂದಿಗೆ ಶಬರೀನ್ ವಿವಾಹ ನಡೆದಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಯಾವುದೋ ಕಾರಣಕ್ಕೆ ಶಬರೀನ್ಳ ಪತಿ ಕೆಲ ವರ್ಷಗಳ ಹಿಂದೆ ವಿಷ ಸೇವಿಸಿ ಆತ್ಮಹತ್ನೆ ಮಾಡಿಕೊಂಡಿದ್ದ. ಇದರಿಂದ ಜೀವನ ನಿರ್ವಹಣೆಗಾಗಿ ಶಬರೀನ್ ಬಾನು ದುಬೈಗೆ ಹೋಗಿದ್ದಳು.
ದುಬೈಯಲ್ಲಿ ಮೂರು ವರ್ಷ ಕೆಲಸ ಮಾಡಿ ಶಬರೀನ್ ವಾಪಸ್ ಮೈಸೂರಿಗೆ ಆಗಮಿಸಿದ್ದಳು. ಬೆಂಗಳೂರಿನ ಯಶವಂತಪುರದಲ್ಲಿ ಶಬರೀನ್ ಗಂಡನಿಗೆ ಸೇರಿದ ಆಸ್ತಿ ಇದೆ. ಇದನ್ನು ಪಡೆಯಲು ಆಕೆ ಸಾಕಷ್ಟು ಹೋರಾಟ ಮಾಡಿದ್ದಳು. ಆದರೆ ಇದರಿಂದ ಯಾವುದೇ ಫಲ ಸಿಕ್ಕಿರಲಿಲ್ಲ. ಜೊತೆಗೆ ಇಬ್ಬರು ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸುವುದು ಆಕೆಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಹಿನ್ನಲೆಯಲ್ಲಿ ಮನನೊಂದ ಶಬರೀನ್ ಬಾನು ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.