ಮೈಸೂರು : ಉದ್ಘಾಟನೆಗೂ ಮುನ್ನವೇ ನಂಜನಗೂಡು ತಾಲೂಕಿನಲ್ಲಿರುವ ಮಾರುಕಟ್ಟೆಯ ಕಟ್ಟಡಗಳಲ್ಲಿ ಬಿರುಕು ಬಿಟ್ಟಿದ್ದು, ಗುತ್ತಿಗೆದಾರ ಹಾಗೂ ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರು ಕಿಡಿಕಾರಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ ಮತ್ತು ಗುತ್ತಿಗೆದಾರರ ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ, ಉದ್ಘಾಟನೆಗೂ ಮುನ್ನವೇ ಮಾರುಕಟ್ಟೆ ಕಟ್ಟಡದಲ್ಲಿ ಬಿರುಕು ಬಿಟ್ಟಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ನಂಜನಗೂಡು ನೂತನ ಮಾರುಕಟ್ಟೆ ಕಟ್ಟಡ ಇದೀಗ ಅಪಾಯದ ಕೂಪಕ್ಕೆ ಕೈಬೀಸಿ ಕರೆಯುತ್ತಿದೆ.
ನಂಜನಗೂಡು ಪಟ್ಟಣದ ಬಜಾರ್ ರಸ್ತೆಯಲ್ಲಿ 2016ರಲ್ಲಿ ವಿ. ಶ್ರೀನಿವಾಸ್ ಪ್ರಸಾದ್ ಕಂದಾಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನೂತನ ಮಾರುಕಟ್ಟೆ ಪ್ರಾಂಗಣ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ಅದರಂತೆ 2.84 ಕೋಟಿ ರೂ. ವೆಚ್ಚದಲ್ಲಿ ಒಟ್ಟು 53 ಮಳಿಗೆಗಳಿರುವ ನೂತನ ಕಟ್ಟಡ ನಿರ್ಮಿಸಲಾಗಿದೆ. ಆದ್ರೆ, ಉದ್ಘಾಟನೆಗೂ ಮುನ್ನವೇ ಕಟ್ಟಡದಲ್ಲಿ ಬಿರುಕು ಕಾಣಿಸಿದೆ. ಉದ್ಘಾಟನೆಗೂ ಮುನ್ನ ಬಿರುಕು ಕಾಣಿಸಿರುವ ಹಿನ್ನೆಲೆ ವ್ಯಾಪಾರಸ್ಥರಲ್ಲಿ ಆತಂಕ ಮನೆ ಮಾಡಿದೆ.
ಹಂದಿಗೂಡಿನಂತೆ ನಿರ್ಮಿಸಲಾಗಿದೆ, ಅವೈಜ್ಞಾನಿಕವಾಗಿ ಮತ್ತು ಕಳಪೆ ಗುಣಮಟ್ಟದಿಂದ ಕಟ್ಟಡ ಕಾಮಗಾರಿ ಮಾಡಲಾಗಿದೆ. ಬದಲಾಗಿ ಈ ನೂತನ ಕಟ್ಟಡದಲ್ಲಿ ರಾತ್ರಿ ವೇಳೆ ಮದ್ಯ ವ್ಯಸನಿಗಳು ಜೂಜುಕೋರರ ಅಡ್ಡವಾಗಿ ಮಾರ್ಪಾಡಾಗಿ ಅಕ್ರಮ ಚಟುವಟಿಕೆ ನಡೆಯುತ್ತಿವೆ. ಇಂತಹ ಕಟ್ಟಡಕ್ಕೆ ನಾವು ಹೇಗೆ ಸ್ಥಳಾಂತರ ಆಗೋದು ಎಂದು ವ್ಯಾಪಾರಸ್ಥರು ಪ್ರಶ್ನಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಠಿಯಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸುಸಜ್ಜಿತ ಕಟ್ಟದ ನಿರ್ಮಾಣವಾಗಿಲ್ಲ. ಕಳಪೆ ಗುಣಮಟ್ಟದ ಈ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಪೋಲಾಗುತ್ತಿದೆ. ಈ ಸಂಬಂದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹವಾಗಿದೆ.