ಮೈಸೂರು: ಎರಡು ಲಾರಿಗಳ ನಡುವೆ ಭೀಕರ ಅಪಘಾತವಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ನಗರದ ಹೊಸ ಕಾಲುವೆಯ ರೈಲ್ವೆ ಮೇಲ್ಸೇತುವೆ ಬಳಿ ನಡೆದಿದೆ.
ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಲಾರಿ ಚಾಲಕ ಸೋಮಶೇಖರ್ ಎಂಬಾತ ಸಾವನ್ನಪ್ಪಿದ್ದಾನೆ. ಈತ ಹಾಸನದಿಂದ ಮೈಸೂರಿಗೆ ಜೋಳ ತುಂಬಿಕೊಂಡು ಬರುತ್ತಿದ್ದ. ಇದೇ ವೇಳೆ ಮತ್ತೊಂದು ಲಾರಿಯ ಚಾಲಕ ಶುಂಠಿ ತುಂಬಿಸಿಕೊಂಡು ಉತ್ತರ ಪ್ರದೇಶಕ್ಕೆ ಸಾಗಿಸುತ್ತಿದ್ದ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಲಾರಿ ನುಜ್ಜುಗುಜ್ಜಾಗಿದೆ. ಮುಖಾಮುಖಿಯಾದ ಲಾರಿಗಗಳನ್ನು ಜೆಸಿಬಿ ಹಾಗೂ ಕ್ರೇನ್ ಬಳಸಿ ಬೇರ್ಪಡಿಸಲಾಗಿದೆ. ಸ್ಥಳಕ್ಕೆ ಕೆ.ಆರ್.ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.