ಮೈಸೂರು:ಮೃತದೇಹ ಸಿಗುವ ಮುಂಚೆಯೇ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ಟೋಬರ್ 3ರಂದು ಯುವ ದಸರಾ ನೋಡಲು ಸ್ನೇಹಿತರೊಂದಿಗೆ ಬಂದಿದ್ದ ಕುವೆಂಪುನಗರ ನಿವಾಸಿ ರಾಹುಲ್(27)ನಾಪತ್ತೆಯಾಗಿದ್ದ. ಈ ಕುರಿತು ಅಕ್ಟೋಬರ್ 5ರಂದು ಕುವೆಂಪುನಗರ ಠಾಣೆಯಲ್ಲಿ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಕಾರ್ಯ ಪ್ರವೃತ್ತರಾದ ಪೊಲೀಸರು ನಾಪತ್ತೆಯಾದ ಯುವಕನ ಮೊಬೈಲ್, ಕಾಲ್‌ಲಿಸ್ಟ್ ಜಾಡು ಹಿಡಿದು ಸ್ನೇಹಿತ ಸಂಜಯ್ ಎಂಬಾತನನ್ನು ಕರೆತಂದು ವಿಚಾರಣೆ ನಡೆಸಿದ್ದರು. ಆಗ ಆರೋಪಿ ತಾನೇ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇನ್ನು, ಕೊಲೆಯಾದ ರಾಹುಲ್ ತನ್ನ ಸ್ನೇಹಿತ ಸಂಜಯ್ ಬಳಿ ಚಿನ್ನದ ಸರ ಪಡೆದಿದ್ದ. ಆ ಸರವನ್ನು ವಾಪಸ್ ಕೊಡಲು ಸತಾಯಿಸುತ್ತಿದ್ದ. ಇದರಿಂದ ಕೋಪಗೊಂಡ ಸಂಜಯ್ ರಾಹುಲ್ ಜೊತೆ ಜಗಳ ತೆಗೆದು ಕರವಸ್ತ್ರದಲ್ಲಿ ಕ್ಲೋರೋಪೋರಂ ಹಾಕಿ ರಾಹುಲ್ ಮೂಗಿಗೆ ಹಿಡಿದ್ದಾನೆ. ಪ್ರಜ್ಞೆ ತಪ್ಪಿದ ರಾಹುಲ್ನನ್ನು ಹೊಡೆದು ಸಾಯಿಸಿ ಕೊನೆಗೆ ಶವವನ್ನು ಬೈಕ್ನಲ್ಲಿ ತೆಗೆದುಕೊಂಡು ಹೋಗಿ ಟಿ.ನರಸೀಪುರ ಬಳಿಯ ವರುಣಾ ನಾಲೆಗೆ ಎಸೆದಿದ್ದಾರೆ. ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿದ್ದು, ಈ ಸಂಬಂಧ ಲಕ್ಷ್ಮಿಪುರಂ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.