ಮೈಸೂರು: ಕೇಂದ್ರದಲ್ಲಿ ಮಂತ್ರಿ ಸ್ಥಾನ ನಾನೇ ಬೇಡ ಎಂದಿದ್ದೇನೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಸುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯನ್ನೇ ಬೇಡ ಎಂದಿದ್ದವನು ನಾನು, ಇನ್ನು ಮಂತ್ರಿ ಪಟ್ಟ ನನಗ್ಯಾಕೆ. ನಾನು ಕೇಂದ್ರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸಚಿವ ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಹಳೇ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಹಳೇ ಮೈಸೂರು ಭಾಗಕ್ಕೆ ಈಗ ಸಾಕಾಗುವಷ್ಟು ಮಂತ್ರಿಸ್ಥಾನ ಇದೆ. ಸಿಎಂ ಸೇರಿದಂತೆ ಈಶ್ವರಪ್ಪ, ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಹಳೇ ಮೈಸೂರು ಭಾಗದವರಾಗಿದ್ದಾರೆ. ಇನ್ನೆಷ್ಟು ಜನರನ್ನು ಗುಡ್ಡೆ ಹಾಕಿ ಕೊಳ್ತಿರಾ ಹೇಳಿ ಎಂದು ಪ್ರಶ್ನಿಸಿದರು.
ಅಳಿಯ ಶಾಸಕ ಹರ್ಷವರ್ಧನ್ ಮಂತ್ರಿಸ್ಥಾನ ಬೇಡಿಕೆ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡೋಲ್ಲ, ಅದು ಅವರ ವೈಯುಕ್ತಿಕ ಹೇಳಿಕೆ ಎನ್ನುವ ಮೂಲಕ ಆ ಬಗ್ಗೆ ಏನ್ನನ್ನೂ ಹೇಳದೇ ನುಣಿಚಿಕೊಂಡರು.
ಧ್ರುವ ನಾರಾಯಣ ಉಗುರಿಗೆ ಸಮನಲ್ಲ:
ಸಂಸದರಾಗಿ ಶ್ರೀನಿವಾಸ್ ಪ್ರಸಾದ್ ಸಾಧನೆ ಏನು ಎಂಬ ಧ್ರುವನಾರಾಯಣ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವನು ನನ್ನ ಉಗುರಿಗೂ ಸಮನಲ್ಲ. ಅವರು ಬಾಲಿಶವಾದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡೋಲ್ಲ ಎಂದರು.
ಸಿಎಂ ವಿರುದ್ಧ ಪ್ರಸಾದ್ ಆಕ್ರೋಶ :
ಸಂಪುಟ ವಿಸ್ತರಣೆ ಹಾಗೂ ಪುಮಾರಚನೆ ವಿಚಾರವಾಗಿ ಮಾತನಾಡಿ, ಸಿಎಂ ಯಡಿಯೂರಪ್ಪ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದು, ಯಡಿಯೂರಪ್ಪ ಸಿಎಂ ಆಗುವಾಗ ನನ್ನ ಪಾತ್ರ ಇತ್ತು. ಈಗ ಸಿಎಂ ಆದ್ರಲ್ಲ ಇನ್ನೇನು ಆ ದರ್ದು ಅವರಿಗೆ ಇಲ್ಲ. ಈಗ ಆರಾಮಾಗಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.