ಮೈಸೂರು: ದಸರಾ ನಾನೇ ಉದ್ಘಾಟನೆ ಮಾಡುವೆ, ನಾನೇ ಕಾಮಗಾರಿ ಉದ್ಘಾಟಿಸುವೆ ಎಂದೆಲ್ಲಾ ಹೇಳಿದ ಸಿದ್ದರಾಮಯ್ಯ ನಂತರ ಸೋಲಿನ ಭಯದಿಂದ ಬಾದಾಮಿಯಲ್ಲಿ ಹೋಗಿ ಚುನಾವಣೆಗೆ ನಿಂತರು ಎಂದು ಸಿದ್ದರಾಮಯ್ಯ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದರು.
ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, 5-6 ಬಾರಿ ಗೆದ್ದವರು, ಮುಖಮಂತ್ರಿಯಾಗಿದ್ದವರಿಗೆ ಗೆಲ್ಲುವ ನಂಬಿಕೆ ಇರಲಿಲ್ಲವೇ. ಯಾಕೆ ಎರಡೆರಡು ಕಡೆ ಚುನಾವಣೆಗೆ ಸ್ಪರ್ಧಿಸಬೇಕಿತ್ತು. ಚಾಮುಂಡೇಶ್ವರಿಯಲ್ಲಿ ಸೋಲಿನ ಭಯದಿಂದ ಬಾದಾಮಿಯಲ್ಲೂ ನಿಂತ ಸಿದ್ದರಾಮಯ್ಯ ಅಲ್ಲಿ 1600 ವೋಟುಗಳಿಂದ ಗೆದ್ದು ಇಲ್ಲಿ ಸೋತಿದ್ದು, ಇವರಿಗೆ ಮನ ಮರ್ಯಾದೆ ಏನು ಇಲ್ಲವೇ ಎಂದು ಪ್ರಶ್ನಿಸಿದರು.
ಇನ್ನು ಬಿಜೆಪಿ ಸೇರಿ ಕಣಕ್ಕಿಳಿದಿರುವ ಶಾಸಕರೆಲ್ಲರೂ ಅವರವರ ಕ್ಷೇತ್ರದಲ್ಲಿ ಗೆಲ್ಲಲ್ಲಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಹುಣಸೂರಿನಲ್ಲಿ ವಿಶ್ವನಾಥ್ ನಾಮಪತ್ರ ಸಲ್ಲಿಕೆ ವೇಳೆ ನಾನು ಹೋಗುವೆ. ದೆಹಲಿಗೆ ಹೋಗಿ ಬಂದ ನಂತರ ಹುಣಸೂರು ಪ್ರಚಾರಕ್ಕೆ ಹೋಗುವೆ ಎಂದರು