ಮೈಸೂರು : ಮೀಸಲಾತಿಗಾಗಿ ಸ್ವಾಮೀಜಿಗಳು ಬೀದಿಗಿಳಿದಿರುವುದು ಸರಿಯಲ್ಲ ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ವ್ಯವಸ್ಥೆ ಅಸಹ್ಯವಾಗಿದೆ. ರಾಜಕಾರಣಿಗಳ ಹೇಳಿಕೆ ಮತ್ತು ಪ್ರತಿ ಹೇಳಿಕೆಗಳು ಜನರಲ್ಲಿ ರಾಜಕಾರಣಿಗಳ ಬಗ್ಗೆ ಅವಿಶ್ವಾಸ ಮೂಡಿಸುತ್ತಿವೆ. ಜಾತಿ ಮೀಸಲಾತಿಗಾಗಿ ಸ್ವಾಮೀಜಿಗಳು ಬೀದಿಗಿಳಿದಿರುವುದು ತಪ್ಪು. ಅವರಿಗೆ ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೊತ್ತಿಲ್ಲ. ಅವರಿಗೆ ಧಾರ್ಮಿಕ ವಿಚಾರಗಳನ್ನು ಬಿಟ್ಟರೆ, ಮೀಸಲಾತಿ, ರಾಜಕೀಯ ವಿಚಾರಗಳು ಗೊತ್ತಿಲ್ಲ. ಈಗ ಬೀದಿಯಲ್ಲಿ ಮೀಸಲಾತಿ ಬಗ್ಗೆ ಹೋರಾಟ ನಡೆಸುತ್ತಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಓದಿ : ಮೀಸಲಾತಿ ಇಲ್ಲದಿದ್ದರೇ ಯಾರಾದರೂ ಗೌಡ್ರ ಮನೆಯಲ್ಲಿ ಜೀತಕ್ಕಿರುತ್ತಿದ್ದೆ : ಮಾಜಿ ಸಂಸದ ಶಿವಣ್ಣ
ರಾಜ್ಯದಲ್ಲಿ ಕೆಲವರು ಮೀಸಲಾತಿ ಕೇಳುವುದು ತಪ್ಪು. ಮೀಸಲಾತಿ ಚಳವಳಿಗಳ ಬಗ್ಗೆ ಸರ್ಕಾರ ಮತ್ತು ಕಾನೂನು ಸಚಿವರು ಹೇಳಿಕೆ ಕೊಟ್ಟು ಸ್ಪಷ್ಟ ನಿಲುವು ತಿಳಿಸಬೇಕು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಆ ಬಗ್ಗೆ ನಾನು ಮಾತನಾಡುವುದಿಲ್ಲ. ಈ ವಿಚಾರದಲ್ಲಿ ಎರಡು ಪಕ್ಷಗಳು ಜನರ ಮುಂದೆ ನಗೆ ಪಾಟಲಿಗೀಡಾಗಿವೆ ಎಂದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ನಡೆಗೆ ಬೇಸರ ವ್ಯಕ್ತಪಡಿಸಿದ ಶ್ರೀನಿವಾಸ್ ಪ್ರಸಾದ್, ವಿಶ್ವನಾಥ್ ಬಗ್ಗೆ ಮಾತನಾಡದಿರುವುದೇ ಲೇಸು ಎಂದರು.