ಮೈಸೂರು: ಮುಂದಿನ ಚುನಾವಣೆಯನ್ನ ಅಭಿವೃದ್ಧಿ ಕೆಲಸದ ಆಧಾರದ ಮೇಲೆ ಎದುರಿಸುತ್ತೇವೆ. ಅದನ್ನು ಬಿಟ್ಟರೆ ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ಎದುರಿಸುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇಂದು ಮೈಸೂರು ಮಹಾನಗರ ಪಾಲಿಕೆಯ ಕಚೇರಿಗೆ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಗರದ ಹೊರ ವಲಯದ ರಿಂಗ್ ರಸ್ತೆಗಳಲ್ಲಿ ಕೆಲವು ಕಡೆ ವೈನ್ ಶಾಪ್ಗಳಿದ್ದು, ಕೆಲವು ಕಡೆ ರಸ್ತೆ ಬದಿಯಲ್ಲೇ ಕುಡಿದು ಕಳ್ಳ ಕಾಕರು ದರೋಡೆ ಮಾಡುತ್ತಾರೆ. ಇದರಿಂದ ಈ ಭಾಗದಲ್ಲಿ ರಾತ್ರಿ ಸಂಚಾರಕ್ಕೆ ತೊಂದರೆಯಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ರಿಂಗ್ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗೆ ಸೇರುವುದರಿಂದ ಈ ಬಗ್ಗೆ ಚರ್ಚೆ ಮಾಡಲು ಪಾಲಿಕೆಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರಿಂಗ್ ರಸ್ತೆಗೆ ಈಗಾಗಲೇ 3000ಕ್ಕೂ ಹೆಚ್ಚು ವಿದ್ಯುತ್ ದೀಪಗಳನ್ನು ಅಳವಡಿಸಿದ್ದು, ಇನ್ನೂ ಹೆಚ್ಚಿನ ವಿದ್ಯುತ್ ದೀಪ ಅಳವಡಿಕೆಗೆ ಪಾಲಿಕೆಯ ಅಧಿಕಾರಿಗಳ ಸಭೆಯನ್ನು ಇಂದು ಕರೆಯಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದರು.
ಅಭಿವೃದ್ಧಿ ಆಧಾರದಲ್ಲಿ ಮತ ಕೇಳುತ್ತೇವೆ: ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿವೆ. ಇದರ ಆಧಾರದ ಮೇಲೆ ಮುಂದಿನ ಚುನಾವಣೆಗೆ ಹೋಗುತ್ತೇವೆ. ಅದನ್ನು ಬಿಟ್ಟು ಜಾತಿ, ಧರ್ಮ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.
ಓದಿ: ರೈಲ್ವೆ ಮಾರ್ಗಕ್ಕೆ ಜಮೀನು ಸರ್ವೇ ವದಂತಿ.. ಸಂಸದ ಪ್ರತಾಪ್ ಸಿಂಹ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ