ಮೈಸೂರು : ನನ್ನನ್ನು ಸೋಲಿಸಿ ಎಂದು ಉದಯಗಿರಿಯಲ್ಲಿ ತಮ್ಮ ಬಾಂಧವರಲ್ಲಿ ಕೇಳುವ ದುಸ್ಥಿತಿ ಸಿಎಂ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ಮೈಸೂರು-ಟಿ. ನರಸೀಪುರ ಹೆದ್ದಾರಿ ವಿಭಾಗದ ಅಭಿವೃದ್ಧಿ ಕಾರ್ಯಗಳನ್ನು ಚರ್ಚಿಸಲು ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಯಾವ ಬಡಾವಣೆಯಲ್ಲಿ ನಿಂತು ನನ್ನನ್ನು ಸೋಲಿಸಿ ಎಂದು ಕರೆ ನೀಡಿದ್ದಾರೆ ನೋಡಿ. ಮೈಸೂರಿನ ಕುವೆಂಪುನಗರ, ಸರಸ್ವತಿಪುರಂ, ಸಿದ್ಧಾರ್ಥ ಬಡಾವಣೆಗಳಲ್ಲಿ ಬಂದು ನಿಂತು ಈ ರೀತಿ ಹೇಳಲು ಆಗುವುದಿಲ್ಲ. ಆದರೆ ಉದಯಗಿರಿಯಲ್ಲಿ ಹೋಗಿ ನನ್ನನ್ನು ಸೋಲಿಸುವಂತೆ ಕೈ ಮುಗಿದು ಕೇಳಿದ್ದಾರೆ. ನನ್ನನ್ನು ಸೋಲಿಸಿ ಎಂದು ಹೇಳುವ ದುಸ್ಥಿತಿಗೆ ಸಿದ್ದರಾಮಯ್ಯ ಅವರು ಬರಬಾರದಿತ್ತು ಎಂದು ಟೀಕಿಸಿದರು.
ನನ್ನನ್ನು ಯಾಕೆ ಸೋಲಿಸಬೇಕು ಅನ್ನೋದಕ್ಕೆ ಕಾರಣ ಕೊಡಿ : ನನ್ನನ್ನು ಜನ ಯಾಕೆ ಸೋಲಿಸಬೇಕು ಎಂಬುದಕ್ಕೆ ಸಿದ್ದರಾಮಯ್ಯ ಅವರು ಐದು ಕಾರಣ ಕೊಡಲಿ. ಮೈಸೂರು-ಬೆಂಗಳೂರು ನಡುವಿನ ಹೆದ್ದಾರಿ ಮಾಡಿದ್ದು ತಪ್ಪಾ?, ಮೈಸೂರನ್ನು ಗ್ರೇಟರ್ ಮೈಸೂರು ಮಾಡಲು ಹೊರಟಿದ್ದು ತಪ್ಪಾ, ವಿಮಾನ ನಿಲ್ದಾಣದ ಅಭಿವೃದ್ಧಿ ಮಾಡಿದ್ದು ತಪ್ಪಾ, ಚಾಮುಂಡಿ ಬೆಟ್ಟ ಅಭಿವೃದ್ಧಿ ಮಾಡಿದ್ದು ತಪ್ಪಾ? ಯಾವ ಕಾರಣಕ್ಕೆ ಮೈಸೂರಿನ ಜನ ನನ್ನನ್ನು ಸೋಲಿಸಬೇಕು ಎಂದು ಐದು ಕಾರಣ ಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ನೀವು 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೀರಿ. ಏನು ಮಾಡಿದ್ದೀರಿ ಎಂಬುದನ್ನು ಜನರಿಗೆ ಹೇಳಿ. ಸಿದ್ದರಾಮಯ್ಯ ಹೇಳಿದರು ಎಂದು ಜನ ನಿಮ್ಮ ಮಾತನ್ನು ಕೇಳುತ್ತಾರಾ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ಸಮಾಜದ ಸ್ವಾಸ್ಥ್ಯ ಕೆಡಿಸಿದ್ದು ಸಿದ್ದರಾಮಯ್ಯ ಅವರು. ಮಹಿಷಾ ದಸರಾ, ಟಿಪ್ಪು ಜಯಂತಿ ಮಾಡಿ ರಾಜ್ಯದ ಸೌಹಾರ್ದತೆಯನ್ನು ಹಾಳು ಮಾಡಿದರು. ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಇದಕ್ಕೆ ಕಾರಣ ಯಾರು?. ಪ್ರತಿ ಬಾರಿ ಪ್ರಧಾನಿ ಮೋದಿಯವರನ್ನು ಟೀಕಿಸುವ ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ವಿರೋಧಿ ಸಿದ್ದರಾಮಯ್ಯ : ಮೈಸೂರು ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯಾಗಿ ಮಾಡುವ ಪ್ರಸ್ತಾವ ಪಾಲಿಕೆಯ ಕೌನ್ಸಿಲ್ ನಿಂದ ಬಂದಿದೆ. ಕೌನ್ಸಿಲ್ ಸಭೆಯನ್ನು ಸರ್ಕಾರ ದಿಢೀರ್ ರದ್ದು ಮಾಡಿದ್ದು, ಕಾಂಗ್ರೆಸ್ ಬೃಹತ್ ಮೈಸೂರು ನಗರ ಪಾಲಿಕೆಯ ವಿರೋಧಿಯಾಗಿದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ನವರಿಗೆ ದಲಿತರು ಕೇರಿಯಲ್ಲೇ ಇರಬೇಕು, ಮುಸ್ಲಿಮರು ಮೊಹಲ್ಲಾದಲ್ಲಿ ಇರಬೇಕು. ನೀವು ಮಾತ್ರ ಸದಾಶಿವ ನಗರದಲ್ಲಿ ಇರಬೇಕಾ?. ಮೈಸೂರು ಹಾಗಾಗಬಾರದು ಎಂಬುದು ನಮ್ಮ ಇಚ್ಛೆ. ನಮಗೆ ಅಭಿವೃದ್ಧಿ ಮಾಡಲು ಬಿಡಿ, ನೀವು ಅಭಿವೃದ್ಧಿ ವಿರೋಧಿಗಳು ಎಂದು ಸಂಸದ ಪ್ರತಾಪ್ ಸಿಂಹ ಟೀಕಾಪ್ರಹಾರ ನಡೆಸಿದರು.
ಇದನ್ನೂ ಓದಿ : ಪ್ರತ್ಯೇಕ ಘಟನೆ: ಕಾಡಾನೆ ಮತ್ತು ಕಾಡು ಹಂದಿ ದಾಳಿಯಿಂದ ಇಬ್ಬರು ಆಸ್ಪತ್ರೆಗೆ ದಾಖಲು