ಮೈಸೂರು: ಭಾರತದಲ್ಲಿ ಸಿಎಎ ಕಾಯ್ದೆ ಯಾಕೆ ಜಾರಿಗೆ ತರಲಾಗಿದೆ ಎಂಬುದನ್ನು ಅಫ್ಘಾನಿಸ್ತಾನದಲ್ಲಿ ಸದ್ಯ ನಡೆಯುತ್ತಿರುವ ತಾಲಿಬಾನ್ ಉಗ್ರರ ಅಟ್ಟಹಾಸವನ್ನು ನೋಡಿ ಅರ್ಥಮಾಡಿಕೊಳ್ಳಬೇಕಿದೆ. ಪ್ರಧಾನಿ ಮೋದಿಯವರು ಇಂತಹ ಪರಿಸ್ಥಿತಿಯನ್ನು ಮೊದಲೇ ಅರಿತು ಸಿಎಎ ಕಾಯ್ದೆ ಜಾರಿಗೊಳಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಭಾರತೀಯರು ಸಿಎಎ ಕಾಯ್ದೆ ಜಾರಿ ಬಗ್ಗೆ ತಿಳಿದುಕೊಳ್ಳಬೇಕು. ಈಗ ಅಫ್ಘಾನಿಸ್ತಾನದ ಸುತ್ತಮುತ್ತ ಹಲವಾರು ಮುಸ್ಲಿಂ ರಾಷ್ಟ್ರಗಳಿದ್ದು, ಯಾರೂ ಅಫ್ಘಾನಿಸ್ತಾನದವರನ್ನು ಕರೆಸಿಕೊಳ್ಳುತ್ತಿಲ್ಲ. ಸಿರಿಯಾ ಮತ್ತು ತಾಲಿಬಾನ್ ಮಾನವ ವಿರೋಧಿಗಳೆಂಬುದು ಇದೀಗ ಸಾಬೀತಾಗಿದೆ.
ಈ ರೀತಿಯ ಮನಸ್ಥಿತಿ ಕೇವಲ ತಾಲಿಬಾನ್ಗಳಿಗಷ್ಟೇ ಅಲ್ಲ, ಭಾರತದಲ್ಲೂ ಅಂತಹದೇ ಜನರಿದ್ದಾರೆ. ಈ ರೀತಿಯ ಅಪಾಯಗಳನ್ನು ತಪ್ಪಿಸಲು ಸಿಎಎ ಕಾನೂನು ತರಲಾಗಿದೆ. ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆ ಮುಸ್ಲಿಂ ರಾಷ್ಟ್ರಗಳಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಎಚ್ಚರಿಕೆ ನೀಡಿದರು.
2022ರ ಮೈಸೂರು ದಸರಾ ವೇಳೆಗೆ ಬೆಂಗಳೂರು - ಮೈಸೂರು ನಡುವೆ ಪ್ರಗತಿಯಲ್ಲಿರುವ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮುಗಿಯಲಿದ್ದು, ಈಗಾಗಲೇ ಶೆ.81ರಷ್ಟು ಆಗಿದೆ. ಬರುವ ಜನವರಿ ಒಳಗೆ ಬೈಪಾಸ್ ಕಾಮಗಾರಿ ಸಹ ಪೂರ್ಣಗೊಳ್ಳಲಿದೆ. ಬಳಿಕ ಬೆಂಗಳೂರು - ಮೈಸೂರು ನಡುವಿನ ಪ್ರಯಾಣ ಕೇವಲ ಒಂದೂವರೆ ಗಂಟೆಯದ್ದಾಗಲಿದೆ. ಕಾಮಗಾರಿ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿ, ಉದ್ಘಾಟನೆ ಮಾಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಸಂಸದೆ ಸುಮಲತಾಗೆ ಟಾಂಗ್:
ಹತ್ತು ಪಥದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂಬ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ಟಾಂಗ್ ನೀಡಿದ ಸಿಂಹ, ಯಾರಿಗೆ ಅನುಮಾನ ಇದೆಯೋ ಅಂತವರು ತಜ್ಞರನ್ನು ಕರೆಸಿಕೊಂಡು ಪರಿಶೀಲನೆ ಮಾಡಿಸಿಕೊಳ್ಳಲಿ. ಇದನ್ನು ತಂದಿರುವುದು ಮೈಸೂರಿಗೋಸ್ಕರ ಮಾತ್ರ. ಮೈಸೂರು ಡೆಸ್ಟಿನೇಷನ್ ಎಂಬ ಕಾರಣಕ್ಕಾಗಿ ನಾನು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ.
ಈ ಸಂದರ್ಭದಲ್ಲಿ ಮಂಡ್ಯದ ಮೇಲೆ ಹೆದ್ದಾರಿ ಹೋಗುತ್ತದೆ ಎಂದು ಮಂಡ್ಯದವರು, ರಾಮನಗರದ ಮೇಲೆ ಹಾದು ಹೋಗುತ್ತದೆ ಎಂದು ರಾಮನಗರದವರು, ಈ ಕಾಮಗಾರಿ ನನ್ನದು ಎಂದು ಹೇಳಿಕೊಂಡರೆ ಅರ್ಥ ಇದೆಯೇ? ಇದು ಮೋದಿ ಸರ್ಕಾರದ ಯೋಜನೆ ಎಂದು ಟಾಂಗ್ ನೀಡಿದರು.
ಈ ಯೋಜನೆ ಸಿದ್ದರಾಮಯ್ಯ ಕಾಲದಲ್ಲಿ ಜಾರಿಯಾಗಿತ್ತು ಎಂಬುದು ಸುಳ್ಳು. ಕಾಂಗ್ರೆಸ್ನವರು ಈ ಯೋಜನೆಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಪದೇ ಪದೇ ಜನರಿಂದ ತಿರಸ್ಕೃತರಾದವರ ಬಗ್ಗೆ ಮಾತನಾಡಬಾರದು. ಅದೇ ರೀತಿ ಸುಮಲತಾ ಈ ಯೋಜನೆ ಕಾಮಗಾರಿ ಮಂಡ್ಯ ರಸ್ತೆಯ ಮೇಲೆ ಹೋಗುತ್ತದೆ ಎಂಬ ಹೇಳಿಕೆಗೆ ನಾನೇನು ಮಾಡಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: 'ತಾಲಿಬಾನಿಗಳು ಯಾವಾಗ ಮನೆ ಬಾಗಿಲು ಬಡೀತಾರೋ ಎಂಬ ಭಯದಲ್ಲೇ ನಮ್ಮ ಬದುಕು': ಕಾಬೂಲ್ ಮಹಿಳಾಧಿಕಾರಿಯ ವೇದನೆ