ಮೈಸೂರು : ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು. ಕಾಂಗ್ರೆಸ್‌ನವರಿಗೆ ಅಂತಹ ಎದೆಗಾರಿಕೆ ಇಲ್ಲ. ಅವರೇ ಮಾಡಿದ ಅಪರಾಧವನ್ನು ಅವರೇ ಸ್ಕ್ರೀನ್‌ನಲ್ಲಿ ನೋಡಲು ಹೇಗೆ ಸಾಧ್ಯ? ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಕಾಂಗ್ರೆಸ್ ನಾಯಕರು ನೋಡದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜನರು ಸಿನಿಮಾ ನೋಡುತ್ತಿದ್ದಾರೆ ಅವರಿಗೆ ಸತ್ಯದ ಅರಿವಾಗಿದೆ. ಕಾಶ್ಮೀರಿ ಫೈಲ್ಸ್‌ನಲ್ಲಿರುವ ಒಂದೊಂದು ದೃಶ್ಯವೂ ಸತ್ಯ. ಅವರೇ ಮಾಡಿದ ಕರ್ಮ ಅವರೇ ಹೇಗೆ ನೋಡಲು ಸಾಧ್ಯ ? ಎಂದು ಆರೋಪಿಸಿದರು.
ಜೈ ಭೀಮ್‌ಗೆ ತೆರಿಗೆ ವಿನಾಯತಿ ಕೊಡಲಿಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿ, ಜೈಭೀಮ್ ಬಿಡುಗಡೆಯಾಗಿದ್ದು ಒಟಿಟಿಯಲ್ಲಿ, ಒಟಿಟಿಯಲ್ಲಿ ತೆರಿಗೆ ವಿನಾಯತಿ ಕೊಡಲು ಹೇಗೆ ಸಾಧ್ಯ? ಕಾಂಗ್ರೆಸ್ ನಾಯಕರು ಪೆದ್ದು ಹೇಳಿಕೆ ಕೊಡುವುದನ್ನು ನಿಲ್ಲಿಸಿಲ್ಲ ಎಂದು ವ್ಯಂಗ್ಯವಾಡಿದರು.
ಪಠ್ಯಕ್ರಮಕ್ಕೆ ಭಗವದ್ಗೀತೆ ಅಳವಡಿಕೆ ಚರ್ಚೆ ವಿಚಾರವಾಗಿ ಮಾತನಾಡಿ, ಭಗವದ್ಗೀತೆ ಹಿಂದೂ ಧರ್ಮ ಗ್ರಂಥ ಅಲ್ಲ. ಸತ್ಯ, ನ್ಯಾಯ, ಧರ್ಮ ಮಾರ್ಗದಲ್ಲಿ ನಡೆಯುವಂತೆ ತಿಳಿ ಹೇಳುವ ಗ್ರಂಥ. ಮಕ್ಕಳಿಗೆ ಭಗವದ್ಗೀತೆ ಬೋಧಿಸೋದು ಸ್ವಾಗತಾರ್ಹ ಎಂದು ಸಮರ್ಥಿಸಿದರು.
ಖುರಾನ್ ಅಲ್ಲಾ ಮಾತ್ರ ದೇವರು, ಅಲ್ಲಾ ಹೊರತು ಬೇರೆ ದೇವರು ಇಲ್ಲ ಅನ್ನುತ್ತೆ. ಬೈಬಲ್ ಯೇಸು ಬಿಟ್ಟರೆ ಬೇರೆ ದೇವರ ಮೆಸೇಂಜರ್ ಇಲ್ಲ ಅನ್ನುತ್ತೆ. ಭಗವದ್ಗೀತೆಯಲ್ಲಿ ಮಾತ್ರ ಧರ್ಮ ಮಾರ್ಗ ಬೋಧನೆ ಮಾಡಲಾಗಿದೆ. ಧರ್ಮ ಅನ್ನುವುದಕ್ಕೆ ರಿಲೀಜಿಯನ್ ಅನ್ನುವ ಸಂಕುಚಿತ ಅರ್ಥ ಕಲ್ಪಿಸುವುದು ಬೇಡ ಎಂದರು.
ಕುರುಕ್ಷೇತ್ರ ಧರ್ಮ- ಅಧರ್ಮಗಳ ನಡುವಿನ ಯುದ್ಧ. ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಜೀವನ ಕ್ರಮ ಹೇಗಿಬೇಕು ಅಂತಾ ಹೋಧಿಸಿದ್ದಾನೆ. ಆದ್ದರಿಂದ ಅಮೆರಿಕಾ ಸೇರಿದಂತೆ ಎಲ್ಲ ದೇಶಗಳ ಅಧ್ಯಕ್ಷರು ಪ್ರಮಾಣ ವಚನ ಸ್ವೀಕಾರ ಮಾಡಲು ಭಗವದ್ಗೀತೆ ಮಾತ್ರ ಸೂಕ್ತವಾಗಿದೆ. ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಮೊಘಲ್ ಸಾಮ್ರಾಜ್ಯ, ದೆಹಲಿ ಸುಲ್ತಾನರ ಕ್ರೌರ್ಯದ ಕತೆಗಳನ್ನೇ ಬೋಧಿಸಲಾಗಿದೆ. ಚೋಳ, ಚೇರರು, ಅಸ್ಸೋಂ ದೊರೆಗಳ ಸಾವಿರಾರು ವರ್ಷಗಳ ಇತಿಹಾಸ ಮರೆಮಾಚಲಾಗಿದೆ ಎಂದರು.
ಇದೆಲ್ಲವನ್ನೂ ಓದಿದರೆ ನಮ್ಮ ಬಗ್ಗೆ ಅಭಿಮಾನವೇ ಮೂಡೋದಿಲ್ಲ. ಈಗಲಾದರೂ ಪಠ್ಯಕ್ರಮ ಬದಲಾವಣೆಗೆ ಮುಂದಾಗಿರೋದು ಸ್ವಾಗತಾರ್ಹ. ಶಿಕ್ಷಣ ಸಚಿವರು, ಸಿಎಂ ಪ್ರಸ್ತಾಪ ಮಾಡಿದ್ದಾರೆ. ತಜ್ಞರ ಸಮಿತಿ ರಚಿಸಿ ಭಗವದ್ಗೀತೆ ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.