ಮೈಸೂರು: ಮರಗಳ್ಳತನ ಆರೋಪ ಪ್ರಕರಣದಲ್ಲಿ ತನ್ನ ಸಹೋದರ ವಿಕ್ರಂ ಸಿಂಹ ಅವರನ್ನು ಬಂಧಿಸಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. "ಸಿಎಂ ಸಿದ್ದರಾಮಯ್ಯ ಅವರಿಗೆ ಸಾಷ್ಟಾಂಗ ನಮಸ್ಕಾರಗಳು. ಅವರನ್ನು ನಾನು ಶ್ಲಾಘಿಸಿಬೇಕು ಅಂದುಕೊಂಡಿದ್ದೇನೆ. ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಹಾಗೂ ತಮ್ಮ ಮಗನನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಯಾರನ್ನು ಬೇಕಾದರೂ ಅವರು ತುಳಿಯುತ್ತಾರೆ. ಇದನ್ನು ಸಿದ್ದರಾಮಯ್ಯ ಅವರಿಂದ ಕಲಿಯಬೇಕು, ಇಂತಹ ತಂದೆ ಎಲ್ಲರಿಗೂ ಸಿಗುವುದಿಲ್ಲ" ಎಂದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನೀವೊಬ್ಬ ಬುದ್ಧಿವಂತ ತಂದೆ. ನಿಜಕ್ಕೂ ನಿಮ್ಮನ್ನು ಮೆಚ್ಚಿದ್ದೇನೆ. ಎಲ್ಲಾ ಮಕ್ಕಳಿಗೂ ನಿಮ್ಮಂತಹ ತಂದೆ ಸಿಗುವುದಿಲ್ಲ. ಪ್ರತಾಪ್ ಸಿಂಹ ಅಡ್ಡಿಯಾಗಿದ್ದಾನೆ ಅಂತ ಮುಗಿಸಲು ಮುಂದಾಗಿದ್ದೀರಿ?. ನಿಮ್ಮಂತಹ ತಂದೆ ಪ್ರಪಂಚದಲ್ಲೇ ಸಿಗುವುದಿಲ್ಲ. ನೀವು ಬ್ರಿಲಿಯೆಂಟ್ ರಾಜಕೀಯ ವ್ಯಕ್ತಿ" ಎಂದರು.
"ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದಾರೆ. ಡಿ.16ರಂದು ಬೇಲೂರಿನ ಜಮೀನಿನ ವಿಚಾರಕ್ಕೆ ನನ್ನ ತಮ್ಮನ ಹೆಸರನ್ನು ಎಳೆದು ತಂದಿದ್ದಾರೆ. ಮರಗಳನ್ನು ಕಡಿದಿದ್ದಾರೆ ಎಂದು ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ರವಿ ಎಂಬವರು ಸಹಾಯ ಮಾಡಿ ಪರಾರಿಯಾಗಿದ್ದಾರೆ. ಈವರೆಗೂ ಈ ಮೂವರನ್ನು ಯಾಕೆ ಹಿಡಿದಿಲ್ಲ" ಎಂದು ಅವರು ಪ್ರಶ್ನಿಸಿದರು.
ಪ್ರತಾಪ್ ಸಿಂಹನನ್ನು ಮುಗಿಸುವ ಯತ್ನ: "ಹನುಮ ಜಯಂತಿ ಸಂದರ್ಭದಲ್ಲಿ ನಾನು ಒಂದು ಹೇಳಿಕೆ ನೀಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ಪ್ರತಾಪ್ ಸಿಂಹನ ತಮ್ಮ ಮರಗಳ್ಳತನ ಮಾಡಿದ್ದಾನೆ ಅಂತ ಕಾಂಗ್ರೆಸ್ನವರು ಪೋಸ್ಟ್ ಹಾಕಿದ್ದರು. ಎಫ್‌ಐಆರ್‌ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಆದರೂ, ಆತನನ್ನು ಬಂಧಿಸುವ ಮೂಲಕ ಪ್ರತಾಪ್ ಸಿಂಹನನ್ನು ಮುಗಿಸುವ ಯತ್ನ ಮಾಡಲಾಗುತ್ತಿದೆ. ಎರಡು ದಿನ ಮೊದಲೇ ನನ್ನ ತಮ್ಮ ಅರಣ್ಯ ಇಲಾಖೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾನೆ. ಆತ ತಲೆಮರೆಸಿಕೊಂಡಿರಲಿಲ್ಲ. ಆತನ ವಿರುದ್ಧ ಎಫ್‌ಐಆರ್ ದಾಖಲಾಗಿರಲಿಲ್ಲ, ಯಾಕೆ ದಾರಿ ತಪ್ಪಿಸುತ್ತಿದ್ದೀರಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮರಗಳನ್ನು ಕಡಿದ ಆರೋಪ ಪ್ರಕರಣ ; ಅರಣ್ಯಾಧಿಕಾರಿಗಳಿಂದ ವಿಕ್ರಂ ಸಿಂಹ ಬಂಧನ
ಯಾಕೆ ಕೋರ್ಟ್ಗೆ ಪ್ರೊಡ್ಯೂಸ್ ಮಾಡಿಲ್ಲ?: "ನಿಮ್ಮ ರಾಜಕೀಯ ಭವಿಷ್ಯಕ್ಕಾಗಿ ಪ್ರತಾಪ್ ಸಿಂಹನನ್ನು ಎಲ್ಲಾ ರೀತಿ ತುಳಿಯುವ ಪ್ರಯತ್ನ ಮಾಡ್ತೀರಿ, ನನ್ನ ಚಾರಿತ್ರ್ಯವಧೆ ಮಾಡುತ್ತಿದ್ದೀರಿ. ನನ್ನ ಕುಟುಂಬದವರನ್ನು ಬೀದಿಗೆ ಎಳೆದು ತರುತ್ತಿದ್ದೀರಿ, ನಿನ್ನೆ ಮೂರು ಗಂಟೆಗೆ ಅರೆಸ್ಟ್ ಮಾಡಿದ್ದೀರಿ. ಆದರೆ, ಈವರೆಗೆ ಯಾಕೆ ಕೋರ್ಟ್ಗೆ ಪ್ರೊಡ್ಯೂಸ್ ಮಾಡಿಲ್ಲ. ನಿಮ್ಮ ತಮ್ಮನಿಗೆ ತೊಂದರೆ ಕೊಡಲ್ಲ ಅಂತೀರಿ. ನನ್ನ ಮೇಲೆ ಎರಡು ಕ್ರಿಮಿನಲ್ ಕೇಸ್ ಹಾಕಿದ್ರಿ. ನಮ್ಮ ವಯೋವೃದ್ಧ ತಾಯಿ, ತಂಗಿಯನ್ನು ಅರೆಸ್ಟ್ ಮಾಡಿ. ನಿಮ್ಮ ಕುಟುಂಬ ರಾಜಕಾರಣವೇ ಮುಂದುವರಿಯಲಿ. ಚಾಮುಂಡಿ, ಕಾವೇರಿ ತಾಯಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಮೈಸೂರು - ಕೊಡಗು ಜನರು ನಿಮಗೆ ಬುದ್ದಿ ಕಲಿಸುತ್ತಾರೆ" ಎಂದು ವಾಗ್ದಾಳಿ ನಡೆಸಿದರು.