ಮೈಸೂರು : ಮೈಸೂರು-ಬೆಂಗಳೂರು ದಶಪಥ ರಸ್ತೆಯ ಕಾಮಗಾರಿ ವಿಡಿಯೋ ಮಾಡಿದ್ದು, ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಎಂದು ಗೊತ್ತಿರಲಿಲ್ಲ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದರು.
ಬೆಂಗಳೂರು-ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ಪಡೆದುಕೊಳ್ಳಲು ಜನಪ್ರತಿನಿಧಿಗಳಲ್ಲಿ ವಾರ್ ಆರಂಭವಾಗಿದೆ. ಈ ವಿಚಾರವಾಗಿ ಇಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಸರಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 8,666 ಕೋಟಿ ರೂ. ಪ್ರಾಜೆಕ್ಟ್ನಲ್ಲಿ 8 ಪೈಸೆನಾದರೂ ವಿಶ್ವನಾಥ್ ಅವರು ಬಿಡುಗಡೆ ಮಾಡಿಸಿದ್ರಾ? ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ರಾ? ಎಂದು ಪ್ರಶ್ನಿಸಿದರು.
ವಿಶ್ವನಾಥ್ ಅವರು ತಾವೇ ಈ ಯೋಜನೆ ತಂದಿದ್ದರೆ ತಮ್ಮ ಚುನಾವಣೆ ವೇಳೆ ಯಾಕೆ ಹೇಳಿಲ್ಲ. ವಿಶ್ವನಾಥ್ ಅವರು ಟೀಕೆ ಮಾಡದ ವ್ಯಕ್ತಿಯೇ ಇಲ್ಲ. ದೇವೇಗೌಡರಿಂದ ಆರಂಭಿಸಿ ಬೈಡನ್ವರೆಗೆ ಎಲ್ಲರನ್ನೂ ಟೀಕಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಮಾತಾಡೋಕೆ ಇನ್ನೂ ಆರಂಭಿಸಿಲ್ಲ.
ಈ ಗ್ಯಾಪ್ನಲ್ಲಿ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ವಿಶ್ವನಾಥ್ ಅವರೇ ಮಾಧ್ಯಮದ ಮುಂದೆ ಚರ್ಚೆ ಮಾಡೋಣ ಬನ್ನಿ. ಈ ಯೋಜನೆಯ ಡೇಟ್ ಟು ಡೇಟ್ ಚರ್ಚೆಯಾಗಲಿ ಎಂದು ವಿಶ್ವನಾಥ್ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.
ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರೇ, ನೀವು ನಿಮ್ಮ ಅವಧಿಯಲ್ಲಿ ಮಾಡಿದ ಒಂದು ರಸ್ತೆ ನೆಟ್ಟಗಿದೆಯಾ ಸರ್? ನಿಮಗೆ ದಶಪಥ ರಸ್ತೆಯ ಕ್ರೆಡಿಟ್ ಬೇಕಾ? ಎಂದು ಹರಿಹಾಯ್ದ ಪ್ರತಾಪ್ ಸಿಂಹ, ನೀವು ಹಿರಿಯರು, ನೀವು ಮಾರ್ಗದರ್ಶನ ಮಾಡಿ ಸರ್. ಬೀದಿ ಜಗಳಕ್ಕೆ ಇಳಿಯಬೇಡಿ ಎಂದರು.
ದಶಪಥ ರಸ್ತೆಯಲ್ಲಿ ಎಲ್ಲಿ ಅವೈಜ್ಞಾನಿಕ ಕಾಮಗಾರಿ ಆಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತೋರಿಸಲಿ. ತಜ್ಞರನ್ನು ನಾನೇ ಕರೆದುಕೊಂಡು ಬರುತ್ತೇನೆ. ರಸ್ತೆ ಅವೈಜ್ಞಾನಿಕವಾಗಿದ್ದರೆ ಅದನ್ನು ನೀವು ಹೇಳಿದ ರೀತಿ ವೈಜ್ಞಾನಿಕವಾಗಿಯೇ ಸರಿ ಪಡಿಸುತ್ತೇವೆ. ಸುಮ್ಮನೆ ಅದು ಅವೈಜ್ಞಾನಿಕ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಗೆ ಮತ್ತೆ ಟಾಂಗ್ ನೀಡಿದರು.
ದಶಪಥ ರಸ್ತೆ ಕ್ರೆಡಿಟ್ ಭಾರತ ಮಾತೆಗೆ ಸೇರಿದ್ದು ಎಂಬ ಶಾಸಕ ರಾಮದಾಸ್ ಹೇಳಿಕೆಗೂ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಗಿ ತಿರುಗೇಟು ನೀಡಿದರು. ಮೋದಿ ಅವರು ಭಾರತ ಮಾತೆಯ ಸುಪುತ್ರ. ಅವರು ಮಾಡುವ ಎಲ್ಲಾ ಕೆಲಸವೂ ಭಾರತ ಮಾತೆಗೆ ಸೇರಿದ್ದು, ಕ್ಷೇತ್ರದಲ್ಲಿ ಮಾಡುವ ಕೆಲಸ ಭಾರತ ಮಾತೆಗೆ ಸೇರಿದ್ದು ಎಂದು ಹೇಳುವ ಕಾಲ ಈಗ ಬಂತಲ್ಲ ನನಗೆ ಸಂತೋಷವಾಗಿದೆ ಎಂದರು.
ಓದಿ: ಮೈಸೂರು ಮೇಯರ್ ಚುನಾವಣೆ.. ಜೆಡಿಎಸ್ ಜತೆ ಮೈತ್ರಿಗೆ ಕಾಂಗ್ರೆಸ್ ವರಿಷ್ಠರ ಸೂಚನೆ : ಶಾಸಕ ತನ್ವೀರ್ ಸೇಠ್