ಮೈಸೂರು: ಸಂಸತ್ ಮೇಲಿನ ಸ್ಮೋಕ್ ಗ್ಯಾಸ್ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ತಳಮಟ್ಟದ ಕಾಂಗ್ರೆಸ್ ನಾಯಕರಿಂದ ಹಿಡಿದು ಸಿಎಂವರೆಗೆ ನನ್ನ ತೇಜೋವಧೆ ಮಾಡಲಾಗುತ್ತಿದೆ. ಅವರಿಗೆ ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲು ಆಗುತ್ತಿಲ್ಲ. ಈ ಮೂಲಕ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಇಂದು ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅರಿತಿರುವ ಕಾಂಗ್ರೆಸ್ಸಿಗರು ಈ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಸೋಷಿಯಲ್ ಮಿಡಿಯಾದಲ್ಲಿ ನನ್ನ ಕೈಗೆ ಬಾಂಬ್ ಕೊಟ್ಟು, ಮುಸ್ಲಿಮರು ಬಳಸುವ ಧ್ವಜವನ್ನು ನನ್ನ ಕುತ್ತಿಗೆಗೆ ಸುತ್ತಿ ತೇಜೋವಧೆಗೆ ಇಳಿದಿದ್ದಾರೆ. ಕಾಂಗ್ರೆಸ್ಸಿಗರು ಹೇಳುವ ಎಲ್ಲ ಮುಸ್ಲಿಮರು ಭಯೋತ್ಪಾದಕರೆನ್ನುವ ರೀತಿಯಲ್ಲಿ ಎಲ್ಲ ಮುಸ್ಲಿಮರಿಗೂ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆಗೆ ಬರಲಿ: ಕಾಂಗ್ರೆಸ್ನವರಿಗೆ ದಮ್ಮು, ತಾಕತ್ತು ಇದ್ದರೆ ಅಭಿವೃದ್ಧಿ ವಿಚಾರದಲ್ಲಿ ನನ್ನನ್ನು ಎದುರಿಸಲಿ. ನಾನು ಕಳೆದ ಒಂಬತ್ತುವರೆ ವರ್ಷಗಳಿಂದ ಮೈಸೂರು-ಕೊಡಗು ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಸಿದ್ದರಾಮಯ್ಯ ಕಳೆದ 40 ವರ್ಷಗಳಿಂದ ಮೈಸೂರಿಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನ್ನೊಂದಿಗೆ ಚರ್ಚೆಗೆ ಬರಲಿ. ಅದನ್ನು ಬಿಟ್ಟು ಧರ್ಮ-ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ಮಧ್ಯೆ ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅಪಾದಿಸಿದರು.
ಸಿದ್ದರಾಮಯ್ಯನವರು ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಸಹ ನಾನೇ ಗೆಲ್ಲುತ್ತೇನೆ. ಕಾಂಗ್ರೆಸ್ಸಿಗರು ಬಡವರ ಮಕ್ಕಳು, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದವರು ರಾಜಕೀಯದಲ್ಲಿ ಮುಂದೆ ಬರಲು ಬಿಡುವುದಿಲ್ಲ. ನಾನು ಎರಡು ಬಾರಿ ಸಂಸದ ಆಗಿರುವುದನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಸದ ಪ್ರತಾಪ್ ಹೇಳಿದರು.
ಎಫ್ಐಆರ್ನಲ್ಲಿ ನನ್ನ ತಮ್ಮನ ಹೆಸರಿಲ್ಲ: ಎಫ್ಐಆರ್ನಲ್ಲಿ ಹೆಸರೇ ಇಲ್ಲದ ನನ್ನ ತಮ್ಮನ ಮೇಲೆ ಮರಗಳ್ಳ ಎಂದು ಕಾಂಗ್ರೆಸ್‌ನವರು ಟೀಕೆ ಮಾಡುತ್ತಿದ್ದಾರೆ. ನನ್ನ ತಮ್ಮ ಕಳೆದ 10 ವರ್ಷಗಳಿಂದ ಶುಂಠಿ ಮತ್ತು ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ನನಗೆ ಇಬ್ಬರು ತಮ್ಮಂದಿರು. ಒಬ್ಬಳು ತಂಗಿ ಇದ್ದಾಳೆ. ಚುನಾವಣಾ ಸಂದರ್ಭದಲ್ಲಿ ಒಂದು ತಿಂಗಳು ಬಂದು ಕೆಲಸ ಮಾಡಿ ಹೋಗುತ್ತಾರೆ. ಅದನ್ನು ಬಿಟ್ಟರೆ ಯಾವಾಗಲೂ ಮೈಸೂರಿಗೆ ಬರುವುದಿಲ್ಲ. ಯಾರು ಅವರನ್ನು ನೋಡಿರಲೂ ಸಾಧ್ಯವಿಲ್ಲ. ಆ ರೀತಿ ರಾಜಕೀಯ ಬದ್ದತೆಗಳನ್ನು ಉಳಿಸಿಕೊಂಡಿದ್ದೇವೆ. ಅದನ್ನು ಬಿಟ್ಟು ಈ ಬಾರಿ ಗೆಲ್ಲಲೇಬೇಕು ಎಂಬ ಹಠದಿಂದ ನನ್ನ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ. ನಿಮ್ಮ ವೈಯಕ್ತಿಕ ವಿಚಾರಗಳು ನನ್ನ ಬಳಿ ಸಾಕಷ್ಟಿವೆ. ಆದರೆ ವೈಯಕ್ತಿಕ ವಿಚಾರದಲ್ಲಿ ತೇಜೋವಧೆ ಮಾಡುವಷ್ಟು ಕೀಳು ಮಟ್ಟದ ರಾಜಕಾರಣ ನಾನಲ್ಲ ಎಂದರು.
ಇದನ್ನೂಓದಿ: ಯುವನಿಧಿ ನೋಂದಣಿಗೆ ಚಾಲನೆ: ಐದೂ ಗ್ಯಾರಂಟಿ ಜಾರಿ ಮಾಡಿದ್ದೇವೆ, ರಾಜ್ಯ ದಿವಾಳಿಯಾಗಿಲ್ಲ; ಸಿದ್ದರಾಮಯ್ಯ