ಮೈಸೂರು: ತಾಯಿಗೆ ಪಾರ್ಶ್ವವಾಯು ತಗುಲಿದ ಬಳಿಕ ಮಗ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಆ ಬಳಿಕ ತಾಯಿಯೂ ಕೂಡ ಮಗನನ್ನು ಹಿಂಬಾಲಿಸಿರುವ ಹೃದಯವಿದ್ರಾವಕ ಘಟನೆ ಹೆಚ್ ಡಿ ಕೋಟೆಯಲ್ಲಿ ನಡೆದಿದೆ. ಹೆಚ್.ಡಿ ಕೋಟೆ ಪಟ್ಟಣದ ಸಿದ್ದಪ್ಪಾಜಿ ಬೀದಿಯಲ್ಲಿ ವಾಸವಾಗಿದ್ದ ಕೃಷ್ಣ (42) ಮತ್ತು ಸಣ್ಣಮಂಚಮ್ಮ (58) ಸಾವಿನಲ್ಲೂ ಒಂದಾದ ತಾಯಿ ಮಗ.
ತಾಯಿ ಮಗ ಒಂದೇ ದಿನ ಸಾವು: ಕಳೆದ ರಾತ್ರಿ ಮಂಚಮ್ಮ ಮೆದುಳಿಗೆ ಪಾರ್ಶ್ವವಾಯು ತಗುಲಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ಮಾಡಿದ ವೈದ್ಯರು ಮೆದುಳಿಗೆ ಪಾರ್ಶ್ವವಾಯು ಹೊಡಿದೆ ತಾಯಿ ಬದುಕುವುದು ಕಷ್ಟ ಎಂದು ಹೇಳಿ ಮನೆಗೆ ಕಳುಹಿಸಿದ್ದರು. ತಾಯಿಯನ್ನು ಮನೆಗೆ ಕರೆದುಕೊಂಡು ಬಂದ ಬಳಿಕ ತೀವ್ರ ನೋವಿನಲ್ಲಿದ್ದ ಮಗನಿಗೆ ಹೃದಯಾಘಾತವಾಗಿದ್ದು, ಕ್ಷಣ ಮಾತ್ರದಲ್ಲೇ ಸಾವನ್ನಪ್ಪಿದ್ದಾರೆ. ಮಗನ ಸಾವಿನ ಬಳಿಕ ಪಾರ್ಶ್ವವಾಯು ಪೀಡಿತ ತಾಯಿ ಕೂಡ ಮೃತಪಟ್ಟಿದ್ದಾರೆ.
ಸಾವಿನಲ್ಲಿ ಒಂದಾದ ತಾಯಿ ಮಗನ ಅಂತ್ಯ ಸಂಸ್ಕಾರವನ್ನು ಒಟ್ಟಿಗೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮೃತರ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಅಮ್ಮ ಮಗನ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
(ಇದನ್ನೂ ಓದಿ: ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರಿನ ತಾಯಿ-ಮಗ ಸಾವು, ತಂದೆ-ಮಗಳ ಸ್ಥಿತಿ ಗಂಭೀರ)