ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರು ನಗರ ದೀಪಾಲಂಕಾರದಲ್ಲಿ ಮಿಂದೆದ್ದಿದೆ. ಸುಮಾರು 17 ದಿನಗಳ ಕಾಲ ನಗರದ ಪ್ರಮುಖ ಬೀದಿಗಳು, ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದಸರಾ ಅಂಗವಾಗಿ ಸೆ.26ರಿಂದ ಅಕ್ಟೋಬರ್ 12ವರೆಗೆ ಸಾಂಸ್ಕೃತಿಕ ನಗರಿ ವಿವಿಧ ದೀಪಾಲಂಕಾರದಿಂದ ಬೆಳಗಿತು.
ದಸರಾ ಜಂಬೂಸವಾರಿ ಪ್ರಾಮುಖ್ಯತೆಯಂತೆ, ಈ ಬಾರಿಯ ದೀಪಾಲಂಕಾರಕ್ಕೂ ಸಹ ಪ್ರಶಂಸೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ದೀಪಾಲಂಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಖುದ್ದು ವೀಕ್ಷಣೆ ಅವಧಿ ವಿಸ್ತರಣೆ ಮಾಡುವಂತೆ ಸೂಚನೆ ನೀಡಿದ್ದರು.
![more-than-five-crore-spent-mysore-dasara-lightings](https://etvbharatimages.akamaized.net/etvbharat/prod-images/kn-mys-03-15-10-2022-dasaralightingsstory-7208092_15102022144222_1510f_1665825142_797.jpg)
ಈ ಮುನ್ನ ದಸರಾ ಉದ್ಘಾಟನೆಯಾದ ಸೆ.26ರಿಂದ ವಿಜಯದಶಮಿ ದಿನವಾದ ಅ.5ರವರೆಗೆ ದೀಪಾಲಂಕಾರ ನಿಗದಿಯಾಗಿತ್ತು. ನಂತರ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ ಮೇರೆಗೆ ಅ.10ರವರೆಗೆ ದೀಪಾಲಂಕಾರ ವಿಸ್ತರಿಸುವಂತೆ ಸಚಿವರು ಸಲಹೆ ನೀಡಿದರು. ಅದಾದ ನಂತರವೂ ಬೇಡಿಕೆ ಹೆಚ್ಚಿದಾಗ ಇನ್ನೂ ಎರಡು ದಿನ (ಅ.12) ದೀಪಾಲಂಕಾರ ವಿಸ್ತರಿಸಿದರು. ಆ ಮೂಲಕ 17 ದಿನಗಳ ದೀಪಾಲಂಕಾರವನ್ನು ಜನರ ವೀಕ್ಷಣೆಗೆ ಮುಕ್ತಗೊಳಿಸಲಾಗಿದ್ದು, ಉತ್ತಮ ಸ್ಪಂದನೆ ದೊರೆಯಿತು.
![more-than-five-crore-spent-mysore-dasara-lightings](https://etvbharatimages.akamaized.net/etvbharat/prod-images/kn-mys-03-15-10-2022-dasaralightingsstory-7208092_15102022144222_1510f_1665825142_735.jpg)
ಈ ಬಾರಿ ಅದ್ಧೂರಿ ದಸರಾ ಆಚರಣೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ದೀಪಾಲಂಕಾರಕ್ಕೆ ನೀಡುವಂತೆ ಸರ್ಕಾರ ಘೋಷಣೆ ಮಾಡಿತ್ತು. ಅಂದಹಾಗೆ ಈ ಅಲಂಕಾರಕ್ಕೆ ಬರೋಬ್ಬರಿ 5.5 ಕೋಟಿ ರೂ. ಖರ್ಚಾಗಿದೆ. 4.5 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸೆಸ್ಕ್‌ಗೆ ಮತ್ತೆ 1 ಕೋಟಿ ರೂ. ಹೆಚ್ಚುವರಿ ಸೇರಿ ಒಟ್ಟೂ 5.5 ಕೋಟಿ ರೂಪಾಯಿ ಖರ್ಚಾಗಿದೆ.
![more-than-five-crore-spent-mysore-dasara-lightings](https://etvbharatimages.akamaized.net/etvbharat/prod-images/kn-mys-03-15-10-2022-dasaralightingsstory-7208092_15102022144222_1510f_1665825142_595.jpg)
ಸೆಸ್ಕ್‌ನಿಂದ ಮೈಸೂರು ನಗರದ ಸುತ್ತಮುತ್ತ 128 ಕಿ.ಮೀ. ಉದ್ದದ ರಸ್ತೆಯೊಂದಿಗೆ 98 ವೃತ್ತಗಳನ್ನು ದೀಪಾಲಂಕಾರ ಮಾಡಲಾಗಿತ್ತು. ಜೊತೆಗೆ ಮೈಸೂರು ಅರಮನೆ ಸೇರಿದಂತೆ ನಾನಾ ಕಲಾಕೃತಿಗಳನ್ನು ನಗರದೆಲ್ಲೆಡೆ ದೀಪಗಳ ಮೂಲಕ ನಿರ್ಮಿಸಿದ್ದು, ಜನರನ್ನು ಆಕರ್ಷಿಸಿದವು. ಈ ಬಾರಿ ವಿದ್ಯುತ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಎಲ್‌ಇಡಿ ದೀಪ ಬಳಕೆ ಮಾಡಲಾಗಿತ್ತು. ಲೇಸರ್ ಲೈಟಿಂಗ್‌ಗಳನ್ನು ಮಾಡಿರುವುದು ಜನರಿಗೆ ವಿಶೇಷ ಅನುಭವ ನೀಡಿತು.
![more-than-five-crore-spent-mysore-dasara-lightings](https://etvbharatimages.akamaized.net/etvbharat/prod-images/kn-mys-03-15-10-2022-dasaralightingsstory-7208092_15102022144222_1510f_1665825142_147.jpg)
ಹೆಚ್ಚು ದಿನಗಳ ಕಾಲ ದೀಪಾಲಂಕಾರದ ವ್ಯವಸ್ಥೆ ಇದ್ದ ಪರಿಣಾಮ ಹೆಚ್ಚುವರಿಯಾಗಿ 2.3 ಲಕ್ಷ ಕಿಲೋವ್ಯಾಟ್ ವಿದ್ಯುತ್ ಬಳಕೆಯಾಗಿದೆ. ವಿಶೇಷವಾಗಿ ನವರಾತ್ರಿ ಮತ್ತು ವಿಜಯದಶಮಿ ದಿನದಂದು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದ ಆ ದಿನಗಳಂದು ದೀಪಾಲಂಕಾರದ ಅವಧಿ ಮುಗಿದರೂ ರಾತ್ರಿ ಹೆಚ್ಚುವರಿಯಾಗಿ ಮುಂದುವರೆಸಲಾಗಿತ್ತು.
ಪ್ರವಾಸೋದ್ಯಮಕ್ಕೆ ಉತ್ತೇಜನ: ಎರಡು ವರ್ಷಗಳ ಕೋವಿಡ್ ನಂತರ ಈ ಬಾರಿಯ ದಸರಾಗೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬಂದಿದೆ. ನಾಡಹಬ್ಬ ದಸರಾ ಅದ್ಧೂರಿ ದಸರಾವಾಗಿ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ದೊರೆಯುವಂತಾಗಿದೆ.
ದೀಪಾಲಂಕಾರ ವೀಕ್ಷಣೆ ಜನರ ಗಮನ ಸೆಳೆದಿದ್ದರಿಂದ ಇದರಿಂದ ಹಲವು ಹೊಟೇಲ್ ಮಾಲೀಕರ ಸಂಘ ಸೇರಿದಂತೆ ನಾನಾ ವಾಣಿಜ್ಯ ಸಂಘಟನೆಗಳು ದೀಪಾಲಂಕಾರ ಮುಂದುವರೆಸುವಂತೆ ಸೆಸ್ಕ್‌ಗೆ ಮನವಿ ಮಾಡಿದವು. ಈ ದೀಪಾಲಂಕಾರವು ಮೈಸೂರಿನ ಪ್ರವಾಸೋದ್ಯಮ, ಅದರ ಬೆಳವಣಿಗೆಗೆ ಪರೋಕ್ಷವಾಗಿ ಸಹಕಾರಿಯಾಗುವ ಮೂಲಕ ಯಶಸ್ಸಿಗೆ ಕಾರಣವಾಗಿದೆ.
ಇದನ್ನೂ ಓದಿ: 36ನೇ ರಾಷ್ಟ್ರೀಯ ಕ್ರೀಡಾಕೂಟ: ಯೋಗಾಸನ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಮೈಸೂರಿನ ಯುವತಿ