ಮೈಸೂರು: ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ, ಮತ್ತಷ್ಟು ಆ್ಯಕ್ಟಿವ್ ಆಗಿರುವ ಮೈಸೂರು ಮಹಾನಗರ ಪಾಲಿಕೆಯು, ಮನೆಮನೆಗೆ ತೆರಳಿ ಕೊರೊನಾ ಲಸಿಕೆ ನೀಡಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೊಬೈಲ್ ತಂಡವನ್ನು ರಚಿಸಿದೆ.
ಈಗಾಗಲೇ ಮೈಸೂರು ನಗರದಲ್ಲಿ 5 ಮೊಬೈಲ್ ಟೀಮ್ ಅನ್ನು ರಚನೆ ಮಾಡಲಾಗಿದ್ದು, ನಗರಪಾಲಿಕೆ ವ್ಯಾಪ್ತಿಯ ಆಯಾಯ ವಾರ್ಡ್ಗಳಲ್ಲಿ ಸಂಘ - ಸಂಸ್ಥೆಗಳ ಸಹಕಾರದೊಂದಿಗೆ ನಿಗದಿ ಮಾಡಿದ ಸ್ಥಳದ ಆವರಣದಲ್ಲಿ ಈ ಮೊಬೈಲ್ ತಂಡವೂ ಆಗಮಿಸಿ ಲಸಿಕೆ ನೀಡಲಿದೆ. ಲಸಿಕೆ ಪಡೆಯಬೇಕೆನ್ನುವ ಜನರು ಆಧಾರ್, ಗುರುತಿನ ಚೀಟಿ ಇದ್ದರೆ ಸಾಕು, ಸ್ಥಳದಲ್ಲಿಯೇ ಲಸಿಕೆ ಸಿಗಲಿದೆ.
ಗ್ರಾಮೀಣ ಭಾಗದಲ್ಲಿ ಈಗಾಗಲೇ ವೈದ್ಯರು ಲಸಿಕೆ ನೀಡುತ್ತಿದ್ದಾರೆ. ಅದರಂತೆ ಮೈಸೂರು ನಗರದಲ್ಲಿ ವೈದ್ಯರನ್ನೊಳಗೊಂಡ ತಂಡದಿಂದ ಲಸಿಕೆ ನೀಡಲಾಗುತ್ತಿದೆ. ಈ ಮೊಬೈಲ್ ತಂಡಕ್ಕೆ ಮೈಸೂರು ನಗರದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಮುದಾಯ ಭವನಗಳು ವಿಶಾಲವಾದ ಸ್ಥಳಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆಯನ್ನು ಮೊಬೈಲ್ ತಂಡ ಮಾಡಲಿದೆ.
ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬರುವ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಸಂಘ - ಸಂಸ್ಥೆಗಳು, ನಗರ ಪಾಲಿಕೆ ಸದಸ್ಯರು, ರಾಜಕೀಯ ಪಕ್ಷಗಳ ಮುಖಂಡರು ಜೋಡಿಸಿದ್ದಾರೆ. ಅಗ್ರಹಾರದ ಬಸವೇಶ್ವರ ರಸ್ತೆಯಲ್ಲಿರುವ, ಮುರುಗಮಠ ಸಮುದಾಯ ಭವನದಲ್ಲಿ ನಾಗರಿಕರಿಗೆ ಶುಕ್ರವಾರ ಮೊಬೈಲ್ ತಂಡದಿಂದ ಲಸಿಕೆ ನೀಡಲಾಯಿತು.