ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಎರಡು ನಾಲಿಗೆ ನೀತಿಯನ್ನು ಅನುಸರಿಸುತ್ತಿದೆ. ಇದರಿಂದ ಗಲಭೆಗಳಾಗುತ್ತಿವೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ಕಿಡಿಕಾರಿದ್ದಾರೆ.
ಇಂದು ನಗರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರವಿಕುಮಾರ್, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪ್ರತಿಭಟನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಏನು ಎಂಬುದು ಗೊತ್ತಾಗುತ್ತಿಲ್ಲ. ಈ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ ಎರಡು ನಾಲಿಗೆ ನೀತಿಯನ್ನು ಅನುಸರಿಸುತ್ತಿರುವುದರಿಂದ ಗಲಭೆಗಳು ಆಗುತ್ತಿವೆ. ಈ ಕಾಯ್ದೆ ದೇಶದಲ್ಲಿ ನಾಲ್ಕು ಬಾರಿ ತಿದ್ದುಪಡಿಯಾಗಿದ್ದು ಆಗ ಇದರ ಬಗ್ಗೆ ಪ್ರತಿಭಟನೆಗಳು ನಡೆಯಲಿಲ್ಲ. ಈಗ ಪ್ರತಿಭಟನೆ ನಡೆಯುವುದಕ್ಕೆ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿಯವರ ವೋಟ್ ಬ್ಯಾಂಕ್ ರಾಜಕಾರಣವೇ ಕಾರಣ ಎಂದು ಟೀಕಾಪ್ರಹಾರ ನಡೆಸಿದರು.
ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಜನ ಸಾಮಾನ್ಯರಿಗೆ ಅರಿವು ಮೂಡಿಸಲು ಜ.1 ರಿಂದ 15 ರ ವರೆಗೆ ದೇಶಾದ್ಯಂತ ಬಿಜೆಪಿ 3 ಕೋಟಿ ಜನರಿಗೆ ತಿಳುವಳಿಕೆ ನೀಡಲಿದೆ. ರಾಜ್ಯದಲ್ಲಿ 30 ಲಕ್ಷ ಜನರಿಗೆ ಅಂದರೆ 1 ಬೂತ್ನಲ್ಲಿ 58 ಜನರಂತೆ ೫58 ಸಾವಿರ ಬೂತ್ ಗಳಲ್ಲಿ ಜನರಿಗೆ ಈ ಕಾಯ್ದೆ ಬಗ್ಗೆ ತಿಳಿವಳಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ಈ ಗಲಾಟೆಗೆ ಕಾಂಗ್ರೆಸ್ ಹಾಗೂ ಬುದ್ಧಿ ಜೀವಿಗಳೇ ಕಾರಣ ಎಂದು ಹರಿಹಾಯ್ದರು.