ಮೈಸೂರು : ಹಿಜಾಬ್ ಹಾಗೂ ಕೇಸರಿ ಶಾಲನ್ನ ಮನೆಯೊಳಗೆ ಹಾಕಿ, ಅದನ್ನ ಶಾಲೆಗೆ ತರಬೇಡಿ. ಇವುಗಳಿಗಿಂತ ಶಿಕ್ಷಣ ದೊಡ್ಡದು ಎಂದು ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರದಲ್ಲಿ ಶಾಲೆಯಲ್ಲಿ ಮೂರು ಜನ ಕಲ್ಲು ಹೊಡೆದರು ಎಂದು ಮೂರು ದಿನ ಶಾಲೆ ಮುಚ್ಚುವುದು ತಪ್ಪು.
ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನ ರಾಜಕೀಯ ಪಕ್ಷಗಳು ಮಾಡುತ್ತಿವೆ. ಆಡಳಿತ ಮತ್ತು ವಿರೋಧ ಪಕ್ಷಗಳು ಹಿಂದೂ ಕೋಮು ವಾದ ಹಾಗೂ ಮುಸ್ಲಿಂ ಮತೀಯವಾದ ಎರಡು ವಿಜೃಂಭಣೆ ಮಾಡುತ್ತಿವೆ. ಧರ್ಮ ಮನೆಯೊಳಗೆ ಇರಬೇಕು. ಇದನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂದರು.
ಬಿಜೆಪಿಯ ಕೆಲವು ವಿಂಗ್ಗಳು ಕೇಸರಿ ಶಾಲು ಗಲಾಟೆ ಸೃಷ್ಟಿ ಮಾಡಿವೆ. ಅದೇ ರೀತಿ ಮುಸ್ಲಿಂ ಮತಾಂಧರು ಹಿಜಾಬ್ ಹೆಸರಿನಲ್ಲಿ ಗಲಾಟೆ ಸೃಷ್ಟಿ ಮಾಡುತ್ತಿದ್ದಾರೆ. ಹಿಜಾಬ್ ಮತ್ತು ಕೇಸರಿಗಿಂತ ಶಾಲೆಯಲ್ಲಿ ಶಿಕ್ಷಣ ದೊಡ್ಡದು. ಹಿಜಾಬ್ ಮತ್ತು ಕೇಸರಿ ಶಾಲನ್ನ ಮನೆಯೊಳಗೆ ಹಾಕಿ ಅದನ್ನ ಶಾಲೆಗೆ ತರಬೇಡಿ. ಸಮವಸ್ತ್ರದಲ್ಲಿ ಧರ್ಮದ ಸಂಕೇತ ಬಿಂಬಿಸುವುದು ಬೇಡ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ವೋಟಿನ ಸಲುವಾಗಿ ಮಕ್ಕಳನ್ನ ಉಪಯೋಗಿಸಬೇಡಿ. ಶಿಕ್ಷಣ ಕ್ಷೇತ್ರದಲ್ಲಿ ವೋಟಿನ ರಾಜಕೀಯ ಮಾಡಬೇಡಿ. ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಅದು ತಪ್ಪು, ಕಲ್ಲು ಹೊಡೆದಿದ್ದಕ್ಕೆ ಮೂರು ದಿನ ರಜೆ ಕೊಡುವುದನ್ನ ಬಿಟ್ಟು ಕಲ್ಲು ಹೊಡೆದವರನ್ನು ಪತ್ತೆಹಚ್ಚಿ ಒಳಗೆ ಹಾಕಬೇಕು ಎಂದು ಆಗ್ರಹಿಸಿದರು.
ರಾಜ್ಯದ ಇಂತಹ ಸಂದರ್ಭದಲ್ಲಿ ಸ್ವಾಮೀಜಿಗಳು ಧರ್ಮ ಗುರುಗಳು, ಧಾರ್ಮಿಕ ಮುಖಂಡರು, ಧ್ವನಿ ಎತ್ತಲಿಲ್ಲ. ಈ ಬಗ್ಗೆ ಇವರು ಕುಳಿತು ಚರ್ಚೆ ಮಾಡಿ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದರು.
ಮೈಸೂರಿನಲ್ಲಿ ವಿವೇಕಾನಂದ ಸ್ಮಾರಕ ಮಾಡಲು ಕನ್ನಡದ ಶತಮಾನದ ಹೆಣ್ಣು ಮಕ್ಕಳ ಶಾಲೆಯನ್ನ ನೆಲಸಮ ಮಾಡಿದ್ದು ಸರಿಯಲ್ಲ. ವಿವೇಕಾನಂದರು ಬದುಕಿದ್ದರೆ ಈ ವಿಚಾರ ಕೇಳಿ ಎದೆ ಒಡೆದು ಕೊಳ್ಳುತ್ತಿದ್ದರು ಎಂದು ಎನ್ಟಿಎಂ ಶಾಲೆಯನ್ನು ನೆಲಸಮ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.