ಮೈಸೂರು: ಯಾವುದೇ ಚರ್ಚೆಯಾಗದೆ ಬಜೆಟ್ ಅಧಿವೇಶನ ಮುಗಿದಿರುವುದು ಜನತಂತ್ರ ವ್ಯವಸ್ಥೆಯ ಅಣಕವಾಗಿದೆ. ಇದರಲ್ಲಿ ಸರ್ಕಾರದ್ದಷ್ಟೇ ಅಲ್ಲ, ವಿರೋಧ ಪಕ್ಷದ ತಪ್ಪೂ ಇದೆ. ಎಲ್ಲಿ ವಿರೋಧ ಪಕ್ಷ ಬಲಿಷ್ಠವಾಗಿರುತ್ತದೆಯೋ ಅಲ್ಲಿ ಸರ್ಕಾರ ಚೆನ್ನಾಗಿರುತ್ತದೆ. ಆದ್ರೆ ರಾಜ್ಯದಲ್ಲಿ ವಿರೋಧ ಪಕ್ಷಗಳು ಹೊಣೆಗೇಡಿತನ ಪ್ರದರ್ಶನ ಮಾಡಿವೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕಾರಣ ಹೆಚ್ಚಾಯ್ತು. ರಾಜ್ಯ ನಾಲ್ಕು ಲಕ್ಷ ಕೋಟಿ ಸಾಲಕ್ಕೆ ಬಂದು ನಿಂತಿದೆ. 2.5 ಲಕ್ಷ ಕೋಟಿ ರೂ. ಬಜೆಟ್ನ್ನು ಚರ್ಚೆ ಇಲ್ಲದೆ ಮುಗಿಸಿದ್ದಾರೆ. ಇಬ್ಬರು ಮಾಜಿ ಸಿಎಂಗಳ ಜವಾಬ್ದಾರಿ ಏನು? ನಿಮಗೆ ಸಿಡಿ ವಿಚಾರವೇ ದೊಡ್ಡದಾಯಿತಾ? ಮಂತ್ರಿಯೇ ರಾಜೀನಾಮೆ ನೀಡಿದ್ದಾರೆ. ಇನ್ನೇನಿದೆ ಎಂದು ಪ್ರಶ್ನಿಸಿದರು.
ಕೋಟ್ಯಂತರ ರೂಪಾಯಿ ಲೂಟಿ ಆಗಿರುವ ಬಗ್ಗೆಯಾಗಲಿ, ಇಡಿ ತನಿಖೆ ಬಗ್ಗೆಯಾಗಲಿ ಚರ್ಚೆ ಮಾಡಲ್ಲ. ಆದರೆ ಸಿಡಿ ಬಗ್ಗೆ ಚರ್ಚೆ ಮಾಡ್ತೀರಿ ಅಂದ್ರೆ ಎಲ್ಲದಕ್ಕಿಂತ ನಿಮಗೆ ಅದೇ ಹೆಚ್ಚಾಯ್ತಾ ಎಂದು ಎಂಎಲ್ಸಿ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ನಿನ್ನೆ ಸದನ ಮುಗಿತು ಅಷ್ಟೆ. ಇದರಲ್ಲಿ ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಆಗಲಿಲ್ಲ. ಬಜೆಟ್ ಅಧಿವೇಶನ ಅಂದ್ರೆ ಆದಾಯ, ತೆರಿಗೆ, ಹಣಕಾಸಿನ ಬಗ್ಗೆ ಚರ್ಚೆ ಆಗಬೇಕಿತ್ತು. ಆದ್ರೆ ಅದ್ಯಾವುದು ಚರ್ಚೆ ಆಗಲೇ ಇಲ್ಲ ಎಂದು ಹರಿಹಾಯ್ದರು.
6 ಮಂತ್ರಿಗಳ ಮೇಲೆ ಚರ್ಚೆ, ಸುಧಾಕರ್ ಮೇಲೆ ಚರ್ಚೆ. ಇದು ಬೇಕಾಗಿತ್ತಾ ನಿಮಗೆ? ಬಜೆಟ್ ಅಧಿವೇಶದಲ್ಲಿ ಇದೇನಾ ಚರ್ಚೆ ಮಾಡೋದು. ಈ ಬಗ್ಗೆ ನಮಗೆ ಜವಾಬ್ದಾರಿ ಇಲ್ಲವೇನೋ ಅನ್ನೋ ರೀತಿ ನಡೆದುಕೊಂಡಿದ್ದೀರಿ. 30 ದಿನ ನಡೆಯಬೇಕಿದ್ದ ಸದನ 21 ದಿನಕ್ಕೆ ಮುಗಿದಿದೆ. ಅದಾದ್ರು ನೆಟ್ಟಗಾಯ್ತಾ ಎಂದು ಪ್ರಶ್ನಿಸಿದರು.
ಒಬ್ಬ ಮಾಜಿ ಸಿಎಂ ಸದನಕ್ಕೆ ಬಂದು ಸಮಯ ವ್ಯರ್ಥ ಮಾಡಿದ್ರು. ಇನ್ನೊಬ್ಬ ಮಾಜಿ ಸಿಎಂ ಸದನಕ್ಕೆ ಬಂದ್ರೆ ಉಪಯೋಗ ಇಲ್ಲ ಎಂದು ಹೇಳಿದ್ರು. ಇಂತವರೆಲ್ಲಾ ವಿರೋಧ ಪಕ್ಷದಲ್ಲಿದ್ದರೆ ಇನ್ನೇನಾಗುತ್ತೆ? ನೀವು ರಾಜಕಾರಣ ಮಾಡಿ ಭಾರಿ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ತೀರಾ? ಜನ ಎಲ್ಲವನ್ನು ನೋಡ್ತಿದ್ದಾರೆ ಎಂದರು.
ಓದಿ: ಬಜೆಟ್ ಅಧಿವೇಶನ ಅರ್ಥಪೂರ್ಣವಾಗಿ ನಡೆಯುತ್ತಿಲ್ಲ : ಬೇಸರ ವ್ಯಕ್ತಪಡಿಸಿದ ಹೆಚ್ ವಿಶ್ವನಾಥ್
ಸುಧಾಕರ್ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರದ ಬಗ್ಗೆ ನಾನು ಚರ್ಚೆ ಮಾಡಲ್ಲ. ಅವರು ನಿನ್ನೆಯೇ ಕ್ಷಮೆ ಕೇಳಿದ್ದಾರೆ. ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅದು ಮುಗಿದು ಹೋಗಿದೆ. ಅದರ ಬಗ್ಗೆ ಚರ್ಚೆ ಅನಗತ್ಯ. ಆದ್ರೆ ವಿರೋಧ ಪಕ್ಷಗಳು ಇದನ್ನು ಉಪಚುನಾವಣೆಗೆ ಬಳಸಿಕೊಳ್ತಿವೆ. ನಾವಿದ್ದಾಗ ಭಾರೀ ಚಿನ್ನ, ವಜ್ರ ಮಾರಾಟ ಮಾಡುವ ಸ್ಥಿತಿ ಇತ್ತು. ಈಗ ಎಲ್ಲವೂ ಹೋಗಿದೆ. ನಾವು ವಾಪಸ್ ಬರುತ್ತೇವೆ ಅಂತ ಮಾತನಾಡುತ್ತಿದ್ದಾರೆ ಎಂದು ಹೆಚ್.ವಿಶ್ವನಾಥ್ ಕುಟುಕಿದರು.