ಮೈಸೂರು: ಆಪರೇಷನ್ ಕಮಲದ ಮೂಲಕ ಬಿಜೆಪಿಯವರು ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದಾರೆ. ಈ ಮೂಲಕ ಸಾವಿರಾರು ಕೋಟಿ ರೂ.ಹಣದ ಹೊಳೆ ಹರಿಸಿದ್ದು, ಇದರ ಬಗ್ಗೆಯೂ ಸಿಬಿಐ ಹಾಗೂ ಇಡಿ ನಡೆಸಲಿ ಎಂದು ಶಾಸಕ ಸಾ.ರಾ. ಮಹೇಶ್ ಆಗ್ರಹಿಸಿದ್ದಾರೆ.
ಮೈಸೂರಿನ ಕಚೇರಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನದ ಮೂಲಕ ಬಿಜೆಪಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದೇವೆ ಎಂದು ಬೀಗುತ್ತಿರುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಕುದುವೆ ವ್ಯಾಪಾರ ಮಾಡುತ್ತಿದ್ದಾರೆ. ಇದರ ಬಗ್ಗೆ ಇಡಿ, ಐಟಿ, ಸಿಬಿಐ ದಾಳಿ ನಡೆಸುತ್ತಿಲ್ಲ. ಮುಂಬೈಗೆ ಹೋಗಿದ್ದ ಅತೃಪ್ತ ಶಾಸಕರಿಗೆ ಬಿಜೆಪಿ ಹಣದ ಹೊಳೆ ಹರಿಸಿರುವ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ ಎಂದು ಆರೋಪಿಸಿದ್ರು.
ದಸರಾದಲ್ಲಿ ಭಾಗಿಯಾಗುವುದಿಲ್ಲ: ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಅನೈತಿಕ ಮಾರ್ಗದಲ್ಲಿ ಅಧಿಕಾರ ಹಿಡಿದಿದೆ. ಬಿಜೆಪಿ ಸಚಿವರಿಗೆ ಸಹಕಾರ ನೀಡುತ್ತೇವೆ, ಆದರೆ, ದಸರಾ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಸಾ. ರಾ. ಮಹೇಶ್ ಖಡಕ್ ಆಗಿ ಹೇಳಿದ್ರು.
ವಿಶ್ವನಾಥ್ ಆಣೆ ಮಾಡಲಿ: ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕರಿಗೆ, ಪಕ್ಷಕ್ಕೆ ಮೋಸ ಮಾಡಿ, ಅನರ್ಹಗೊಂಡಿರುವ ಹೆಚ್ .ವಿಶ್ವನಾಥ್ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ ಎಂದು ದೇವಸ್ಥಾನದ ಮುಂದೆ ಆಣೆ ಮಾಡಲಿ. ನಾನು ಅಂದು ನನ್ನ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಸಾ. ರಾ. ಮಹೇಶ್ ಸವಾಲು ಹಾಕಿದ್ದಾರೆ.